ನವದೆಹಲಿ: ಪ್ರಧಾನಿ ಮೋದಿ ಮತ್ತೊಂದು ಹಂತದ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದು, ಈ ಬಾರಿ ಭಾರತದ ಅತ್ಯಾಪ್ತ ರಾಷ್ಟ್ರ ರಷ್ಯಾಕ್ಕೆ ಭೇಟಿ ನೀಡಲಿದ್ದಾರೆ.
ಸೆಪ್ಟೆಂಬರ್ 4ರಂದು ಆರಂಭವಾಗುವ ಎರಡು ದಿನ ರಷ್ಯಾ ಪ್ರವಾಸದಲ್ಲಿ ಪೂರ್ವ ಆರ್ಥಿಕ ವೇದಿಕೆ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪಾಲ್ಗೊಳ್ಳಲಿದ್ದಾರೆ.
ಪ್ರಧಾನಿ ಮೋದಿ ರಷ್ಯಾ ಪ್ರವಾಸದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ, ಉಭಯ ದೇಶಗಳು ಉತ್ತಮ ಬಾಂಧವ್ಯವನ್ನು ಹೊಂದಿದ್ದು, ಇಂಧನ ವಲಯದಲ್ಲಿ ಸಂಬಂಧ ವೃದ್ಧಿ ಮಾಡುವ ಇರಾದೆ ಹೊಂದಲಾಗಿದೆ ಎಂದಿದ್ದಾರೆ.
ಆರ್ಥಿಕತೆ ಹಾಗೂ ಪರಮಾಣು ಶಕ್ತಿ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಬಾಂಧವ್ಯ ಇನ್ನಷ್ಟು ವಿಸ್ತರಣೆಯಾಗುವ ಇಂಗಿತವನ್ನು ಪ್ರಧಾನಿ ಮೋದಿ ಹೊಂದಿದ್ದಾರೆ ಎಂದು ವಿಜಯ್ ಗೋಖಲೆ ಹೇಳಿದ್ದಾರೆ.