ನವದೆಹಲಿ: ಚೀನಾದ ಕೊರೊನಾ ವೈರಸ್ ಪೀಡಿತ ವುಹಾನ್ ನಗರದಿಂದ, ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಸಹಕರಿಸಿದ ವೈದ್ಯಕೀಯ ತಂಡದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಸಫ್ದರ್ಜಂಗ್ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ ಮನು ಜೋಸೆಫ್ ಅವರಿಗೆ ಪತ್ರ ಬರೆದಿದ್ದಾರೆ.
ಕೊರೊನೊ ವೈರಸ್ ಪೀಡಿತವಾದ ವುಹಾನ್‌ನಿಂದ ನಮ್ಮ ದೇಶದ ನಾಗರಿಕರನ್ನು ಸ್ಥಳಾಂತರ ಮಾಡುವಲ್ಲಿ ಹಾಗೂ ಜೀವ ಉಳಿಸುವ ಪ್ರಯತ್ನಗಳನ್ನು ಸಫ್ದರ್ಜಂಗ್ ಮತ್ತು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗಳ ವೈದ್ಯಕೀಯ ತಂಡ ಮಾಡಿದೆ, ಇದೊಂದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೊರೊನಾವೈರಸ್ ಏಕಾಏಕಿ ಇಡೀ ಜಗತ್ತನ್ನೇ ಚಿಂತೆಗೀಡು ಮಾಡಿರುವಂತಹದ್ದು, ಇಂತಹ ಸನ್ನಿವೇಶದಲ್ಲಿ ಸಂಕಷ್ಟದಲ್ಲಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಿ ರಕ್ಷಿಸಿದವರಿಗೆ ಧನ್ಯವಾದ ಸಮರ್ಪಿಸುವುದು ಅತ್ಯಂತ ಅವಶ್ಯವಾದುದು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.