ನವದೆಹಲಿ: ದೇಶಾದ್ಯಂತ ಕೋವಿಡ್-19 ಅಬ್ಬರ ಜೋರಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿದೆ. ಇದರ ಮಧ್ಯೆ ನಾಳೆ ಎಲ್ಲ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಮತ್ತೊಂದು ಸುತ್ತಿನ ವಿಡಿಯೋ ಕಾನ್ಪರೆನ್ಸ್ನಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ.
ಈಗಾಗಲೇ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 62 ಸಾವಿರ ಗಡಿ ದಾಟಿದ್ದು, ಸಾವಿನ ಸಂಖ್ಯೆ 2109 ಆಗಿದೆ. ಇದರ ಮಧ್ಯೆ ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್ಡೌನ್ 3.0 ಮೇ 17ಕ್ಕೆ ಮುಕ್ತಾಯಗೊಳ್ಳಲಿರುವ ಕಾರಣ ಪ್ರಧಾನಿ ಮೋದಿ ನಡೆಸಲಿರುವ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ.
ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದೆಹಲಿ, ಪಶ್ಚಿಮ ಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ಅಲ್ಲಿನ ಮುಖ್ಯಮಂತ್ರಿಗಳಿಗೆ ಮತ್ತಷ್ಟು ಜವಾಬ್ದಾರಿ ನೀಡಿ ನಿಯಂತ್ರಣ ಮಾಡಲು ಸಹಲೆ ನೀಡುವ ಸಾದ್ಯತೆ ದಟ್ಟವಾಗಿದೆ.
ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಈಗಾಗಲೇ ಎಲ್ಲ ರಾಜ್ಯ ಕಾರ್ಯದರ್ಶಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದು, ನಾಳೆ ಮಧ್ಯಾಹ್ನ 3 ಗಂಟೆಗೆ ವಿಡಿಯೋ ಕಾನ್ಫರನ್ಸ್ ಆರಂಭಗೊಳ್ಳಲಿದೆ. ದೇಶದಲ್ಲಿ ಲಾಕ್ಡೌನ್ 3.0 ಜಾರಿಯಲ್ಲಿದ್ದು, ರೆಡ್,ಗ್ರೀನ್, ಆರೆಂಜ್ ಝೋನ್ ಎಂಬ ವಲಯ ಜಾರಿಯಲ್ಲಿರುವ ಮುಂದಿನ ನಡೆ ಯಾವ ರೀತಿಯಾಗಿ ಇರಬೇಕು ಎಂಬುದರ ಕುರಿತು ನಮೋ ಮಾಹಿತಿ ನೀಡಲಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಕೇರಳ, ನವದೆಹಲಿ, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲರೊಂದಿಗೆ ನಮೋ ವಿಡಿಯೋ ಸಂವಾದದಲ್ಲಿ ಭಾಗಿಯಾಗಲಿದ್ದಾರೆ. ಕೊರೊನಾ ವೈರಸ್ ಪರಿಸ್ಥಿತಿ ಹಾಗೂ ಸೋಂಕು ಹರಡುವುದನ್ನ ತಡೆಗಟ್ಟಲು ವಿವಿಧ ರಾಜ್ಯಗಳು ಕೈಗೊಂಡಿದ್ದ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಜತೆಗೆ ಎಷ್ಟರ ಮಟ್ಟಿಗೆ ಸಫಲವಾಗಿದೆ ಎಂಬುದರ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ವೇಳೆ ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಉಪಸ್ಥಿತರಿರುವ ಸಾಧ್ಯತೆ ಇದೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಎರಡು ಸಲ ಎಲ್ಲ ರಾಜ್ಯದ ಮುಖ್ಯಮಂತ್ರಿ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ನಮೋ ಮಾತನಾಡಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ಉಳಿದುಕೊಂಡಿರುವ ವಲಸೆ ಕಾರ್ಮಿಕರನ್ನ ಈಗಾಗಲೇ ತವರು ರಾಜ್ಯಗಳಿಗೆ ರವಾನೆ ಮಾಡಲಾಗ್ತಿದ್ದು, ಅವರಿಗೆ ಯಾವ ರೀತಿಯಲ್ಲಿ ನಡೆಸಿಕೊಳ್ಳಬೇಕು. ಕ್ವಾರಂಟೈನ್ ಯಾವ ರೀತಿಯಲ್ಲಿರಬೇಕು ಎಂಬುದರ ಕುರಿತು ನಮೋ ಮಾತನಾಡಲಿದ್ದಾರೆ.