ನವದೆಹಲಿ: ಮಧ್ಯಪ್ರದೇಶದ ರೇವಾದಲ್ಲಿ ಸ್ಥಾಪಿಸಲಾಗಿರುವ 750 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಹಲವು ಕೇಂದ್ರ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಯೋಜನೆಯು 250 ಮೆಗಾವ್ಯಾಟ್ನ ಮೂರು ಸೌರ ಉತ್ಪಾದನಾ ಘಟಕಗಳನ್ನು ಒಳಗೊಂಡಿದೆ. ಇದು ಸೌರ ಪಾರ್ಕಿನೊಳಗೆ 500 ಹೆಕ್ಟೇರ್ ಜಾಗದಲ್ಲಿದೆ. ದೆಹಲಿ ಮೆಟ್ರೋ ಸೇರಿದಂತೆ ರಾಜ್ಯದ ಹೊರಗಿನ ಸಾಂಸ್ಥಿಕ ಗ್ರಾಹಕರಿಗೆ ಸರಬರಾಜು ಮಾಡುವ ಮೊದಲ ನವೀಕರಿಸಬಹುದಾದ ಇಂಧನ ಯೋಜನೆ ಇದಾಗಿದೆ. ಶೇ.24 ರಷ್ಟು ಶಕ್ತಿಯನ್ನು ರಾಜ್ಯದ ಹೊರಗಿನ ಸಂಸ್ಥೆಗಳಿಗೆ ಬಳಸಲಾಗುತ್ತದೆ. ಉಳಿದ ಶೇ.76 ರಷ್ಟು ಶಕ್ತಿಯನ್ನು ಮಧ್ಯಪ್ರದೇಶ ರಾಜ್ಯ ವಿತರಣಾ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತದೆ.
100 ಗಿಗಾವ್ಯಾಟ್ ಸೌರ ಸ್ಥಾಪಿತ ಸಾಮರ್ಥ್ಯವನ್ನು ಒಳಗೊಂಡಂತೆ 2022 ರ ಹೊತ್ತಿಗೆ ಜಿ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆ ಗುರಿಯನ್ನು ಸಾಧಿಸುವ ಭಾರತದ ಬದ್ಧತೆಗೆ ಈ ಯೋಜನೆ ಉದಾಹರಣೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಮನ್ವಯದಿಂದ ಈ ಉತ್ತಮ ಫಲಿತಾಂಶ ಬಂದಿದೆ.
'ಗ್ರಿಡ್ ಪ್ಯಾರಿಟಿ ತಡೆಗೋಡೆ'ಯನ್ನು ಮುರಿದ ದೇಶದ ಮೊದಲ ಸೌರ ಯೋಜನೆ:
2017 ರ ಆರಂಭದ ಸೌರ ಯೋಜನೆಯ ಸುಂಕಕ್ಕೆ ಹೋಲಿಸಿದರೆ ಪ್ರತಿ ಯೂನಿಟ್‌ಗೆ ಅಂದಾಜು 4.50 ರೂ. ಇತ್ತು. ಆದರೆ, ರೇವಾ ಯೋಜನೆ ಮೊದಲ ವರ್ಷದಲ್ಲಿ ಪ್ರತಿ ಯೂನಿಟ್‌ಗೆ 2.97 ರೂ.ಗಳ ಸುಂಕ ವಿಧಿಸಲಿದೆ. 15 ವರ್ಷಗಳಲ್ಲಿ ಪ್ರತಿ ಯೂನಿಟ್‌ಗೆ 0.05 ರೂ. ಹೆಚ್ಚಾಗಲಿದೆ. 25 ವರ್ಷಗಳ ಅವಧಿಯಲ್ಲಿ 3.30 ರೂ. ಪ್ರತೀ ಯುನಿಟ್ಗೆ ಸುಂಕ ಹೆಚ್ಚಳವಾಗಲಿದೆ.
ರೇವಾ ಯೋಜನೆಯು ಅದರ ರಚನೆ ಮತ್ತು ಆವಿಷ್ಕಾರಗಳಿಗಾಗಿ ಭಾರತ ಮತ್ತು ವಿದೇಶಗಳಿಂದ ಅಂಗೀಕಾರ ಪಡೆದುಕೊಂಡಿದೆ. ರಾಜ್ಯಗಳು ತಮ್ಮ ವಿದ್ಯುತ್ ಅಭಿವರ್ಧಕರಿಗೆ ಅಪಾಯ ಕಡಿಮೆ ಮಾಡಲು ರೇವಾ ಯೋಜನೆಯ ಭದ್ರತಾ ಕಾರ್ಯವಿಧಾನವನ್ನು ಮಾದರಿಯಾಗಿ ಪರಿಗಣಿಸುವಂತೆ ಇಂಧನ ಸಚಿವಾಲಯ ಶಿಫಾರಸು ಮಾಡಿದೆ.
ಯೋಜನೆಯು ಅದರ ನಾವೀನ್ಯತೆ ಮತ್ತು ಶ್ರೇಷ್ಠತೆಗಾಗಿ ವಿಶ್ವಬ್ಯಾಂಕ್ ಗ್ರೂಪ್ ಅಧ್ಯಕ್ಷ ಪ್ರಶಸ್ತಿ ಪಡೆದಿದೆ ಮತ್ತು ಪ್ರಧಾನ ಮಂತ್ರಿಯ 'ಎ ಬುಕ್ ಆಫ್ ಇನ್ನೋವೇಶನ್: ನ್ಯೂ ಬಿಗಿನಿಂಗ್ಸ್' ನಲ್ಲಿ ಸೇರಿಸಲ್ಪಟ್ಟಿದೆ.
ಮಧ್ಯಪ್ರದೇಶದ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ ಮತ್ತು ಸೌರ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾದ ಜಂಟಿ ಉದ್ಯಮವಾದ ಈ ಸೋಲಾರ್ ಪಾರ್ಕ್ನ್ನು, ರೇವಾ ಅಲ್ಟ್ರಾ ಮೆಗಾ ಸೋಲಾರ್ ಲಿಮಿಟೆಡ್ (ಆರ್ಎಂಎಸ್ಎಲ್) ಅಭಿವೃದ್ಧಿಪಡಿಸಿದೆ . ಈ ಸೌರ ಪಾರ್ಕ್ ಅಭಿವೃದ್ಧಿಗೆ ಆರ್‌ಎಂಎಸ್‌ಎಲ್‌ಗೆ ಕೇಂದ್ರ 138 ಕೋಟಿ ರೂ.ಗಳ ಆರ್ಥಿಕ ನೆರವು ನೀಡಿದೆ.
ಸೋಲಾರ್ ಪಾರ್ಕ್ ಅಭಿವೃದ್ಧಿಪಡಿಸಿದ ನಂತರ, ತಲಾ 250 ಮೆಗಾವ್ಯಾಟ್ನ ಮೂರು ಸೌರ ಉತ್ಪಾದನಾ ಘಟಕಗಳನ್ನು ಅಭಿವೃದ್ಧಿಪಡಿಸಲು, ಮಹೀಂದ್ರಾ ರಿನ್ಯೂವೆಬಲ್ಸ್ ಪ್ರೈವೇಟ್ ಲಿಮಿಟೆಡ್, ಎಸಿಎಂಇ ಜೈಪುರ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್, ಮತ್ತು ಅರಿನ್ಸುನ್ ಕ್ಲೀನ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳನ್ನು ರಿವರ್ಸ್ ಹರಾಜಿನ ಮೂಲಕ ಆರ್ಎಂಎಸ್ಎಲ್ ಆಯ್ಕೆ ಮಾಡಿದೆ.