ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಪಶ್ಚಿಮ ಬಂಗಾಳ ಹಾಗೂ ಒಡಿಶಾ ರಾಜ್ಯಗಳಿಗೆ ಪ್ರಯಾಣ ಬೆಳೆಸಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ಪಿಎಂ ಕಚೇರಿ ತಿಳಿಸಿದೆ.
ವೈಮಾನಿಕ ಸಮೀಕ್ಷೆ ನಡೆಸಿ, ಬಳಿಕ ಪರಿಶೀಲನಾ ಸಭೆ ನಡೆಸಿ, ಪರಿಹಾರ ಮತ್ತು ಪುನರ್ವಸತಿ ಕುರಿತು ಚರ್ಚಿಸಲಿದ್ದಾರೆ ಎಂದು ಪಿಎಂಒ ಗುರುವಾರ ರಾತ್ರಿ ಟ್ವೀಟ್ ಮಾಡಿದೆ. ಮಾ.24 ರಂದು ಹೇರಲಾಗಿದ್ದ ಕೋವಿಡ್-19 ಲಾಕ್ ಡೌನ್ ಬಳಿಕ ಹೊರರಾಜ್ಯಗಳಿಗೆ ನೀಡುತ್ತಿರುವ ಪ್ರಧಾನಿ ಮೋದಿಯ ಮೊದಲ ಭೇಟಿ ಇದಾಗಿದೆ. ಮೂಲಗಳ ಪ್ರಕಾರ ಮೋದಿ ಮೊದಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ಬಳಿಕ ಒಡಿಶಾಗೆ ತೆರಳಲಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅಂಫಾನ್, 72 ಜನರನ್ನು ಬಲಿಪಡೆದಿದ್ದು, ಸಾವಿರಾರು ಜನರು ತಮ್ಮ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾಗುವಂತೆ ಮಾಡಿದೆ. ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಸೇತುವೆಗಳಿಗೆ ಹಾನಿ ಮಾಡಿದೆ. ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ವಿದ್ಯುತ್ ಮತ್ತು ಟೆಲಿಕಾಂ ಮೂಲಸೌಕರ್ಯಗಳನ್ನು ಹಾನಿಗೊಳಿಸಿದ್ದು, ಒಂದು ಬಲಿಯಾಗಿದೆ.
ಅಂಫಾನ್ ಸೃಷ್ಟಿಸಿದ ಅವಾಂತರದ ಕುರಿತು ನಿನ್ನೆ ಪ್ರತಿಕ್ರಿಯೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಚಂಡಮಾರುತದಿಂದ ಉಂಟಾದ ಅನಾಹುತಗಳ ದೃಶ್ಯಗಳನ್ನು ನೋಡಿದ್ದೇನೆ. ಇಂತಹ ಸವಾಲಿನ ಸಂದರ್ಭದಲ್ಲಿ ಪಶ್ಚಿಮ ಬಂಗಾಳದೊಂದಿಗೆ ಇಡೀ ರಾಷ್ಟ್ರವಿದೆ. ರಾಜ್ಯದ ಜನತೆಯ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು.