ನವದೆಹಲಿ: ಪ್ರಾಪರ್ಟಿ ಕಾರ್ಡ್‌ಗಳನ್ನು ವಿತರಿಸುವ ಸ್ವಾಮಿತ್ವ ಯೋಜನೆಗೆ ಪಿಎಂ ನರೇಂದ್ರ ಮೋದಿ ವಿಡಿಯೋ ಕಾನ್ಫ್ರೆನ್ಸ್ ಮೂಲಕ ಚಾಲನೆ ನೀಡಿದರು.
ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ನಕ್ಷೆ (ಸಾಮಿತ್ವ) ಯೋಜನೆಯಡಿ ಆಸ್ತಿ ಕಾರ್ಡ್‌ಗಳ ಭೌತಿಕ ವಿತರಣೆಯನ್ನು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದರು.
ಈ ಕಾರ್ಡ್ಗಳು ಹಳ್ಳಿಗಳಲ್ಲಿ ವಾಸಿಸುವ ಜನರು ಮತ್ತು ಅವರು ಹೊಂದಿರುವ ಸುತ್ತಮುತ್ತಲಿನ ಪ್ರದೇಶಗಳ ಆಸ್ತಿಯ ಹಕ್ಕುಪತ್ರಗಳ ಭೌತಿಕ ಪ್ರತಿಗಳಾಗುತ್ತವೆ. ಏಪ್ರಿಲ್ನಲ್ಲಿ ಈ ಸ್ವಾಮಿತ್ವ ಯೋಜನೆಯನ್ನು ಆರಂಭಿಸಲಾಯಿತು. ಇದು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ತಮ್ಮ ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಅವಕಾಶ ಒದಗಿಸುತ್ತದೆ. ಈ ಯೋಜನೆಯಿಂದ 6.62 ಲಕ್ಷ ಗ್ರಾಮಗಳಿಗೆ ಲಾಭವಾಗಲಿದ್ದು, ರೈತರ ಜಮೀನುಗಳು ಸಂಪೂರ್ಣ ಡಿಜಿಟಲೀಕರಣಗೊಳ್ಳಲಿವೆ.
ಸ್ವಾಮಿತ್ವ ಯೋಜನೆಯು ಉತ್ತರಪ್ರದೇಶದ 346, ಹರಿಯಾಣದ 221, ಮಹಾರಾಷ್ಟ್ರದ 100, ಮಧ್ಯಪ್ರದೇಶದ 44, ಉತ್ತರಾಖಂಡದ 50 ಮತ್ತು ಕರ್ನಾಟಕದ 2 ಗ್ರಾಮಗಳನ್ನು ಒಳಗೊಂಡಿದೆ. ಈ ಪ್ರದೇಶಗಳಲ್ಲಿ ವಾಸಿಸುವ ಸುಮಾರು 763 ಫಲಾನುಭವಿಗಳು ಯೋಜನೆಯ ಲಾಭವನ್ನು ಪಡೆಯಲಿದ್ದಾರೆ.
ಮಹಾರಾಷ್ಟ್ರ ರಾಜ್ಯವನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಫಲಾನುಭವಿಗಳಿಗೆ ಒಂದೇ ದಿನದಲ್ಲಿ ಆಸ್ತಿ ಕಾರ್ಡ್‌ಗಳ ಭೌತಿಕ ಪ್ರತಿಗಳು ಲಭ್ಯವಾಗಲಿವೆ. ಪ್ರಾಪರ್ಟಿ ಕಾರ್ಡ್ನ ವೆಚ್ಚವನ್ನು ಮರುಪಡೆಯುವ ವ್ಯವಸ್ಥೆಯನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ. ಈ ಹಿನ್ನೆಲೆ ಅದು ಪ್ರಾಪರ್ಟಿ ಕಾರ್ಡ್‌ಗಳ ವಿತರಣೆಗೆ ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡಿದೆ.
ಸಾಲ ಮತ್ತು ಇತರ ಹಣಕಾಸಿನ ಪ್ರಯೋಜನಗಳನ್ನು ತೆಗೆದುಕೊಳ್ಳಲು ಗ್ರಾಮಸ್ಥರು ಈ ಆಸ್ತಿಯನ್ನು ಆರ್ಥಿಕ ಆಸ್ತಿಯಾಗಿ ಬಳಸಲು ಪ್ರಾಪರ್ಟಿ ಕಾರ್ಡ್ ದಾರಿ ಮಾಡಿಕೊಡುತ್ತದೆ. ಗ್ರಾಮೀಣ ಪ್ರದೇಶದಲ್ಲಿರುವ ಮನೆ ಮಾಲೀಕರಿಗೆ 'ಹಕ್ಕುಗಳ ದಾಖಲೆ' ಒದಗಿಸುವುದು ಮತ್ತು ಆಸ್ತಿ ಕಾರ್ಡ್‌ಗಳನ್ನು ನೀಡುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಯೋಜನೆಯನ್ನು ನಾಲ್ಕು ವರ್ಷಗಳ (2020-2024) ಅವಧಿಯಲ್ಲಿ ಹಂತಹಂತವಾಗಿ ದೇಶಾದ್ಯಂತ ಜಾರಿಗೆ ತರಲಾಗುತ್ತಿದ್ದು, ಅಂತಿಮವಾಗಿ ದೇಶದ ಸುಮಾರು 6.62 ಲಕ್ಷ ಗ್ರಾಮಗಳಿಗೆ ತಲುಪುವ ಉದ್ದೇಶ ಹೊಂದಿದೆ.