ನವದೆಹಲಿ: ಆಸ್ತಿ ಕಾರ್ಡ್ ವಿತರಿಸುವ 'ಸ್ವಾಮಿತ್ವ' (SVAMITVA) ಯೋಜನೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಅನೇಕ ವರ್ಷಗಳಿಂದ ವಾಸ ಮಾಡಿರುವ ತಮ್ಮ ಜಾಗದ ದಾಖಲೆ ಹೊಂದಿರದವರಿಗೆ ಹಕ್ಕುಪತ್ರ ನೀಡುವ ಯೋಜನೆ ಇದಾಗಿದೆ.
"ಈ ಯೋಜನೆ ಸುಮಾರು ಒಂದು ಲಕ್ಷ ಮಂದಿ ಆಸ್ತಿ ಮಾಲೀಕರು ತಮ್ಮ ಮೊಬೈಲ್ ಫೋನ್‌ಗೆ ಬಂದ ಎಸ್‌ಎಂಎಸ್ ಲಿಂಕ್ ಮೂಲಕ ತಮ್ಮ ಆಸ್ತಿ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ. ಇದರ ನಂತರ ಆಯಾ ರಾಜ್ಯ ಸರ್ಕಾರಗಳು ಆಸ್ತಿ ಕಾರ್ಡ್‌ಗಳನ್ನು ಭೌತಿಕವಾಗಿ ವಿತರಿಸುತ್ತವೆ" ಎಂದು ಕೇಂದ್ರ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.
ಉತ್ತರ ಪ್ರದೇಶದಿಂದ 346, ಹರಿಯಾಣದಿಂದ 221, ಮಹಾರಾಷ್ಟ್ರದಿಂದ 100, ಮಧ್ಯಪ್ರದೇಶದಿಂದ 44, ಉತ್ತರಾಖಂಡದಿಂದ 50 ಮತ್ತು ಕರ್ನಾಟಕದ 2 ಸೇರಿದಂತೆ ಆರು ರಾಜ್ಯಗಳ 763 ಗ್ರಾಮಗಳ ಫಲಾನುಭವಿಗಳು ಈ ಯೋಜನೆಯ ಭಾಗವಾಗಿದ್ದಾರೆ.
ಸಾಲ ಮತ್ತು ಇತರ ಆರ್ಥಿಕ ಸವಲತ್ತು ಪಡೆಯಲು ಈ ಯೋಜನೆ ಸಕಾರಿಯಾಗಲಿದೆ. ಗ್ರಾಮಸ್ಥರು ತಮ್ಮ ಆಸ್ತಿಯನ್ನು ಆರ್ಥಿಕ ಸೌಲಭ್ಯಕ್ಕಾಗಿ ಬಳಸಿಕೊಳ್ಳಲು ದಾರಿ ಮಾಡಿಕೊಡುತ್ತದೆ ಎಂದು ಸರ್ಕಾರ ಹೇಳಿದೆ. ಲಕ್ಷಾಂತರ ಗ್ರಾಮೀಣ ಆಸ್ತಿ ಮಾಲೀಕರಿಗೆ ಅನುಕೂಲವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಇಷ್ಟು ದೊಡ್ಡ ಪ್ರಮಾಣದ ಯೋಜನೆ ನಡೆಸುತ್ತಿರುವುದು ಇದೇ ಮೊದಲು ಎನ್ನಲಾಗ್ತಿದೆ.
ಯೋಜನೆಗೆ ಚಾಲನೆ ನೀಡಿದ ನಂತರ ಪ್ರಧಾನಿ ಮೋದಿ ಅವರು ಕೆಲವು ಫಲಾನುಭವಿಗಳೊಂದಿಗೆ ಸಂವಹನ ನಡೆಸಲಿದ್ದಾರೆ. ಕೇಂದ್ರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ಉಪಸ್ಥಿತರಿರಲಿದ್ದಾರೆ.