ನವದೆಹಲಿ: ಇಂದು ನಡೆಯಲಿರುವ ಯುಎಸ್-ಇಂಡಿಯಾ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯ (USISPF) 3ನೇ ವಾರ್ಷಿಕ ನಾಯಕತ್ವ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ರಾತ್ರಿ 9 ಗಂಟೆಗೆ ಪ್ರಧಾನಿ ಮೋದಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಬುಧವಾರ ಮಾಹಿತಿ ನೀಡಿದೆ.
ಯುಎಸ್ಐಎಸ್ಪಿಎಫ್ ಲಾಭ ರಹಿತ ಸಂಸ್ಥೆಯಾಗಿದ್ದು, ಭಾರತ ಮತ್ತು ಅಮೆರಿಕಾ ನಡುವಿನ ಪಾಲುದಾರಿಕೆಗಾಗಿ ಕಾರ್ಯನಿರ್ವಹಿಸುತ್ತದೆ. ಐದು ದಿನಗಳ ಕಾಲ ನಡೆಯಲಿರುವ ಶೃಂಗಸಭೆ ಆಗಸ್ಟ್ 31ರಂದು ಪ್ರಾರಂಭವಾಗಿದ್ದು, "ಯುಎಸ್-ಇಂಡಿಯಾದ ಹೊಸ ಸವಾಲುಗಳಿಗೆ ಪರಿಹಾರಗಳು" ಎಂಬುದು ಈ ಬಾರಿಯ ಸಭೆಯ ವಿಷಯವಾಗಿದೆ.
ಜಾಗತಿಕ ಉತ್ಪಾದನಾ ಕೇಂದ್ರವಾಗಲು ಭಾರತಕ್ಕಿರುವ ಸಾಮರ್ಥ್ಯ, ಭಾರತದ ಅನಿಲ ಮಾರುಕಟ್ಟೆಯಲ್ಲಿನ ಅವಕಾಶಗಳು, ಭಾರತದಲ್ಲಿ ವಿದೇಶಿ ನೇರ ಬಂಡವಾಳ (ಎಫ್ಡಿಐ) ಆಕರ್ಷಿಸಲು ಇರುವ ಸುಲಭ ಮಾರ್ಗಗಳು, ಇಂಡೋ-ಪೆಸಿಫಿಕ್ ಆರ್ಥಿಕ ವಿಷಯಗಳು ಸೇರಿದಂತೆ ಮುಂತಾದ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು.