ನವದೆಹಲಿ: ಕತಾರ್‌ನ ಅಮೀರ್, ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದು, ಈ ವೇಳೆ ಕತಾರ್ ಹೂಡಿಕೆ ಪ್ರಾಧಿಕಾರದ ಮೂಲಕ (ಕ್ಯೂಐಎ) ಭಾರತಕ್ಕೆ ಹೂಡಿಕೆ ಮಾಡಲು ಅನುಕೂಲವಾಗುವಂತೆ ವಿಶೇಷ ಕಾರ್ಯಪಡೆ ರಚಿಸಲು ಉಭಯ ರಾಷ್ಟ್ರಗಳಿಂದ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದೇ ವೇಳೆ ಮುಂಬರುವ ಕತಾರ್ ರಾಷ್ಟ್ರೀಯ ದಿನಾಚರಣೆಗಾಗಿ ಪ್ರಧಾನಿ ಮೋದಿ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರಿಗೆ ಶುಭಾಶಯ ಕೋರಿದ್ದಾರೆ ಎಂದು ಪ್ರಧಾನಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ.
ಇದನ್ನೂ ಓದಿ: 'IN-SPAce' ನೇತೃತ್ವ ವಹಿಸಲು ಕೇಂದ್ರಕ್ಕೆ ಇಸ್ರೋದ ಮೂವರು ವಿಜ್ಞಾನಿಗಳ ಹೆಸರು ಶಿಫಾರಸು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಮೀರ್, ಕತಾರ್‌ನ ರಾಷ್ಟ್ರೀಯ ದಿನದಲ್ಲಿ ಭಾರತೀಯ ಸಮುದಾಯ ಭಾಗವಹಿಸುವಿಕೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ದೀಪಾವಳಿ ಹಬ್ಬಕ್ಕೆ ಪ್ರಧಾನಿ ಮೋದಿಗೆ ಶುಭಾಶಯ ಕೋರಿದ್ದರು.
ಹೂಡಿಕೆ ಮತ್ತು ಇಂಧನ ಸುರಕ್ಷತೆ ಕ್ಷೇತ್ರಗಳಲ್ಲಿ ಉಭಯ ದೇಶಗಳ ಸಹಕಾರ ಸಂಬಂಧದ ಬಗ್ಗೆ ಈ ವೇಳೆ ಚರ್ಚೆ ನಡೆಸಲಾಯಿತು. ಕೊರೊನಾ ನಂತರ ಜನಜೀವನ ಸಾಮಾನ್ಯ ಸ್ಥಿತಿಗೆ ಬಂದ ನಂತರ ಪರಸ್ಪರ ಭೇಟಿಗೆ ಉಭಯ ನಾಯಕರು ಚಿಂತನೆ ನಡೆಸಿದ್ದಾರೆ.