ಹೈದರಾಬಾದ್: ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಿಂದ ತರಬೇತಿ ಮುಗಿಸಿದ ನಿಯೋಜಿತ ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದ್ದಾರೆ.
ತೆಲಂಗಾಣದ ಹೈದರಾಬಾದ್ನಲ್ಲಿ ಪೊಲೀಸ್ ಅಕಾಡೆಮಿ ನಡೆಸುವ 'ದೀಕ್ಷಾಂತ್ ಪರೇಡ್' ಹೆಸರಿನ ಕಾರ್ಯಕ್ರಮದಲ್ಲಿ, ಅಧಿಕಾರಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ವೇಳೆ ಎದುರಿಸುವ ಒತ್ತಡ ಹಾಗೂ ಸಾರ್ವಜನಿಕರ ಮುಂದೆ ಪೊಲೀಸ್ ಅಧಿಕಾರಿಗಳ ಚಿತ್ರಣದ ಕುರಿತು ಪಿಎಂ ಮೋದಿ ಮಾತನಾಡಿದರು. ಕೋವಿಡ್ ಬಿಕ್ಕಟ್ಟಿನ ವೇಳೆಯಲ್ಲಿ ಪೊಲೀಸರ ಕಾರ್ಯದ ಕುರಿತು ಉದಾಹರಣೆಗಳ ಸಹಿತ ಬರಹವನ್ನು ಸಿದ್ಧಪಡಿಸುವಂತೆ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ತಿಳಿಸಿದ್ದಾರೆ.
ಕೆಲಸದ ಒತ್ತಡ ರೈತನಿಂದ ಹಿಡಿದು ಪ್ರತಿಯೊಬ್ಬರ ಮೇಲೂ ಇರುತ್ತದೆ. ಇದು ಜೀವನದ ಒಂದು ಭಾಗವೇ ಹೊರತು ನಿರ್ವಹಿಸಲಾಗದ ಸಂಗತಿಯಲ್ಲ. ನಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡರೆ ಎಲ್ಲವನ್ನೂ ಸರಾಗವಾಗಿ ನಿರ್ವಹಿಸಬಹುದು. ಇಂತಹ ವಿಚಾರಗಳ ಕುರಿತು ಮಾತನಾಡುವ ಜನರನ್ನಾಗಲಿ, ಶಿಕ್ಷಕರನ್ನಾಗಿ ಭೇಟಿ ಮಾಡಲು ಪ್ರಯತ್ನಿಸಿ. ಅವರು ಒತ್ತಡ ರಹಿತ ಬದುಕಿನ ಕುರಿತು ಮಾಹಿತಿ ನೀಡುತ್ತಾರೆ. ನಿಮ್ಮ ವೃತ್ತಿಯಲ್ಲಿ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು, ಅವುಗಳನ್ನು ಎದುರಿಸಲು ಸದಾ ಸಿದ್ಧರಿರಬೇಕು. ಇಚ್ಛಾಶಕ್ತಿ ಮತ್ತು ಆತ್ಮವಿಶ್ವಾದಿಂದ ಪ್ರತಿನಿತ್ಯ ನೀವು ಯೋಗ-ಪ್ರಾಣಾಯಾಮ ಮಾಡಿದರೆ ನಿಮಗೆ ಒತ್ತಡದ ಅನುಭವವಾಗುವುದಿಲ್ಲ. ಯಾವಾಗಲೂ ಖುಷಿಯಾಗಿರುತ್ತೀರಿ ಎಂದು ಅಧಿಕಾರಿಗಳಿಗೆ ಮೋದಿ ಸಲಹೆ ನೀಡಿದರು.
ಪೊಲೀಸರು ಎಂದಾಕ್ಷಣ ಜನರ ಕಣ್ಮುಂದೆ ಬರುವುದು ಹೊಡೆಯುತ್ತಿರುವ ದೃಶ್ಯ. ಹಾಗಂದ ಮಾತ್ರಕ್ಕೆ ಪೊಲೀಸರು ಮಾನವೀಯ ಕೆಲಸಗಳನ್ನು ಮಾಡಿಲ್ಲ ಎಂದು ಅರ್ಥವಲ್ಲ. ಸಮಾಜವು ಪೊಲೀಸರ ಕೆಲಸದ ಕುರಿತು ಸರಿಯಾಗಿ ಅರಿತುಕೊಂಡಿಲ್ಲ. ಕೊರೊನಾ ಪರಿಸ್ಥಿತಿ ಹಾಗೂ ಲಾಕ್ಡೌನ್ ವೇಳೆಯಲ್ಲಿ ತಮ್ಮ ಯೋಗಕ್ಷೇಮವನ್ನೂ ಲೆಕ್ಕಿಸದೆ ಕಷ್ಟದಲ್ಲಿದ್ದ ಜನರಿಗೆ ನೆರವಾಗಿದ್ದಾರೆ. ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಿ, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ಊಟ-ನೀರು ಇಲ್ಲದವರಿಗೆ ಆಹಾರ ಪೂರೈಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇಂತಹ ಸಂಗತಿಗಳನ್ನು ತೋರಿಸುವ ಲಿಖಿತ ತುಣುಕುಗಳನ್ನು ಸಿದ್ಧಪಡಿಸಿ, ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಿ ಎಂದು ಪ್ರಧಾನಿ ಪೊಲೀಸ್ ಅಕಾಡೆಮಿಗೆ ತಿಳಿಸಿದರು.
28 ಮಹಿಳಾ ಪ್ರೊಬೇಷನರ್ಗಳು ಸೇರಿದಂತೆ ಒಟ್ಟು 131 ಪ್ರೊಬೇಷನರಿ ಐಪಿಎಸ್ ಅಧಿಕಾರಿಗಳು ತರಬೇತಿ ಅವಧಿಯನ್ನು ಪೂರ್ಣಗೊಳಿಸಿದರು. ಇವರೆಲ್ಲ 2018ರ ಡಿಸೆಂಬರ್ 17ರಂದು ಅಕಾಡೆಮಿಗೆ ಸೇರ್ಪಡೆಯಾಗಿದ್ದಾರೆ.