ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಕೇಂದ್ರ ಸರ್ಕಾರವು ಆದೇಶ ನೀಡಬೇಕು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದರು.
ಸಂಸತ್ಗೆ ನೂತನವಾಗಿ ಆಯ್ಕೆಯಾದ ತಮ್ಮ ಪಕ್ಷದ 18 ಸಂಸದರೊಂದಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರ ಕಟ್ಟುವ ಧೈರ್ಯ ಹೊಂದಿದ್ದಾರೆ. ಇದನ್ನು ಯಾರಿಂದಲೂ ತಡೆಯಲು ಆಗುವುದಿಲ್ಲ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣವು ಹಲವು ವರ್ಷಗಳಿಂದ ನ್ಯಾಯಾಲಯದಲ್ಲಿದೆ. ಪ್ರಧಾನಿ ಅವರು ಮಂದಿರ ಕಟ್ಟುವ ಧೈರ್ಯವಂತರು. ಈ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಂಡರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಶಿವ ಸೇನಾ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಹಿಂದೂಗಳು ಇವರ ಜೊತೆಗೆ ಇರುತ್ತಾರೆ ಎಂದು ತಿಳಿಸಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರ ಒಂದು ಆದೇಶ ಹೊರಡಿಸಬೇಕು. ಶೀಘ್ರವೇ ಮಂದಿರ ನಿರ್ಮಾಣ ಆಗಬೇಕು ಎಂಬುದು ಹಿಂದೂಗಳ ಬಯಕೆ. ಕಾನೂನ್ ಬನೋ ಮಂದಿರ್ ಬನೋ (ಕಾನೂನು ರೂಪಿಸಿ ಮಂದಿರ ರೂಪಿಸಿ) ಎಂದು ಠಾಕ್ರೆ ಆಗ್ರಹಿಸಿದ್ದಾರೆ.