ಗಾಂಧಿನಗರ (ಗುಜರಾತ್): ಜಗತ್ತಿನಾದ್ಯಂತ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ ಮತ್ತು ಉದ್ಯಮಶೀಲತೆ ಮತ್ತು ಉದ್ಯೋಗದ ಬೆಳವಣಿಗೆಗೆ ಹಲವಾರು ಅವಕಾಶಗಳಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
ಸಮ್ಮೇಳನ ಸಮಾರಂಭದಲ್ಲಿ ಪಂಡಿತ್ ದೀನ್ ದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪಿಎಂ ಮೋದಿ, ಕೊರೊನಾ ಸಾಂಕ್ರಾಮಿಕದಿಂದಾಗಿ, ಜಗತ್ತಿನಾದ್ಯಂತ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ. ಇಡೀ ವಿಶ್ವಾದ್ಯಂತ ಇಂಧನ ಕ್ಷೇತ್ರದಲ್ಲಿ ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ಸಮಯ, ಉದ್ಯಮಶೀಲತೆ ಮತ್ತು ಉದ್ಯೋಗದ ಬೆಳವಣಿಗೆಗೆ ಅನೇಕ ಅವಕಾಶಗಳಿವೆ ಎಂದರು.
ನಿಮ್ಮ ಕೌಶಲ್ಯ, ಪ್ರತಿಭೆ ಮತ್ತು ವೃತ್ತಿಪರತೆಯ ಮೂಲಕ ನೀವು ಈ ಕೊರೊನಾ ವಿರುದ್ಧ ಹೋರಾಡುವಿರಿ. ಆತ್ಮನಿರ್ಭರ ಭಾರತ್ ಕಾರ್ಯಾಚರಣೆಗೆ ಶಕ್ತಿ ತುಂಬುವಿರಿ ಎಂದು ನನಗೆ ವಿಶ್ವಾಸವಿದೆ. ಇಂದು ನಾವು ದೇಶದ ಇಂಗಾಲದ ಹೊರ ಸೂಸುವಿಕೆಯನ್ನು ಶೇಕಡಾ 30 - 35 ರಷ್ಟು ಕಡಿಮೆ ಮಾಡುವ ಗುರಿಯೊಂದಿಗೆ ಮುಂದುವರಿಯುತ್ತಿದ್ದೇವೆ. ಇಂಧನ ಅಗತ್ಯಗಳಿಗಾಗಿ ನೈಸರ್ಗಿಕ ಅನಿಲದ ಬಳಕೆ ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದರು.
ಪ್ರಪಂಚ ಇಷ್ಟು ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಪದವಿ ಪಡೆಯುವುದು ಸುಲಭದ ಮಾತಲ್ಲ. ಆದರೆ, ನಿಮ್ಮ ಸವಾಲುಗಳು ಈ ಸವಾಲುಗಳಿಗಿಂತ ದೊಡ್ಡದಾಗಿದೆ. ಯಶಸ್ವಿ ಜನರು ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದರೆ, ಅವರು ಸವಾಲುಗಳನ್ನು ಸ್ವೀಕರಿಸಿ ಅದನ್ನು ಎದುರಿಸಿ, ಸಮಸ್ಯೆಗಳನ್ನು ಪರಿಹರಿಸಿಕೊಂಡು, ಅಂತಿಮವಾಗಿ ಯಶಸ್ವಿಯಾಗುತ್ತಾರೆ ಎಂದು ಹುರಿದುಂಬಿಸಿದರು.
ಇದೇ ವೇಳೆ, ಪ್ರಧಾನಿ ಮೋದಿ ವಿಶ್ವವಿದ್ಯಾನಿಲಯದಲ್ಲಿ 45 ಮೆಗಾವ್ಯಾಟ್ ಉತ್ಪಾದನಾ ಘಟಕದ ಮೊನೊಕ್ರಿಸ್ಟಲಿನ್ ಸೌರ ಫೋಟೋ ವೋಲ್ಟಾಯಿಕ್ ಪ್ಯಾನಲ್ ಮತ್ತು ನೀರಿನ ತಂತ್ರಜ್ಞಾನದ ಶ್ರೇಷ್ಠತೆಯ ಕೇಂದ್ರಕ್ಕೆ ಅಡಿಪಾಯ ಹಾಕಿದರು. ತಂತ್ರಜ್ಞಾನ ಉದ್ಯಮ ಇನ್ಕ್ಯುಬೇಷನ್, ಅನುವಾದ ಸಂಶೋಧನಾ ಕೇಂದ್ರ ಮತ್ತು ಕ್ರೀಡಾ ಸಂಕೀರ್ಣವನ್ನು ಉದ್ಘಾಟಿಸಿದರು.