ಬೆಂಗಳೂರು: ವಿಶ್ವದಾದ್ಯಂತ ಕೊರೊನಾ ಮಹಾಮಾರಿಗೆ ತಡೆಯಲು ಎಲ್ಲಾ ರಾಷ್ಟ್ರಗಳೂ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನ ನಡೆಸುತ್ತಿವೆ. ಈ ಸೋಂಕಿಗೆ ಚಿಕಿತ್ಸೆ ನೀಡಲು ಹಲವು ರೀತಿಯ ಪ್ರಯೋಗಗಳೂ ನಡೆಯುತ್ತಿವೆ. ಕೆಲ ರಾಷ್ಟ್ರಗಳು ಲಸಿಕೆ ಕಂಡುಹಿಡಿಯಲು ಮುಂದಾದರೆ, ಇನ್ನೂ ಕೆಲವು ರಾಷ್ಟ್ರಗಳು ಬೇರೆ ಬೇರೆ ವಿಧಾನದ ಮೂಲಕ ಚಿಕಿತ್ಸೆ ನೀಡಲು ತಯಾರಿ ನಡೆಸಿಕೊಳ್ಳುತ್ತಿವೆ. ಇವುಗಳಲ್ಲಿ ಪ್ಲಾಸ್ಮಾ ಥೆರಪಿಯೂ ಒಂದಾಗಿದ್ದು ಭಾರತದಲ್ಲಿ ಈಗಾಗಲೇ ಕೆಲ ರಾಜ್ಯಗಳು ಸೋಂಕಿತರ ಮೇಲೆ ಪ್ಲಾಸ್ಮಾ ಥೆರಪಿಯನ್ನು ಪ್ರಯೋಗಿಸಲು ಮುಂದಾಗಿ ಕೇಂದ್ರ ಸರ್ಕಾರದ ಅನುಮತಿಗೆ ಮನವಿ ಮಾಡಿವೆ.
''ಪ್ಲಾಸ್ಮಾ ಥೆರಪಿ ಅಧಿಕೃತ ಚಿಕಿತ್ಸಾ ಕ್ರಮವಲ್ಲ''
ಕೇಂದ್ರ ಆರೋಗ್ಯ ಇಲಾಖೆ ಈಗಾಗಲೇ ಪ್ಲಾಸ್ಮಾ ಥೆರಪಿ ಚಿಕಿತ್ಸೆಯನ್ನು ಅಧಿಕೃತವಲ್ಲ, ಕೇವಲ ಪ್ರಾಯೋಗಿಕ ಎಂದು ಘೋಷಿಸಿದೆ. ಕೇರಳದ ಸಂಸ್ಥೆ ಎಸ್‌ಸಿಟಿಐಎಂಎಸ್‌ಟಿ ಈಗಾಗಲೇ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಪ್ಲಾಸ್ಮಾ ಥೆರಪಿಯನ್ನು ಪ್ರಾಯೋಗಿಕವಾಗಿ ನಡೆಸಲು ಅಗತ್ಯವಿರುವ ನಿಯಮಾವಳಿಗಳನ್ನು ರೂಪಿಸುತ್ತಿದೆ ಎಂದು ಹೇಳಿಕೊಂಡಿದೆ. ನಿಯಮಗಳ ರಚನೆಯಾದ ನಂತರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ದೊರೆತ ಮೇಲಷ್ಟೇ ರಾಜ್ಯಗಳಲ್ಲಿ ಪ್ರಯೋಗ ನಡೆಯಲಿದೆ. ಈಗಾಗಲೇ ಸ್ಮೃತಿ ಠಕ್ಕರ್ ಎಂಬ ಕೊರೊನಾ ಸೋಂಕಿನಿಂದ ಗುಣಮುಖರಾದ ಮಹಿಳೆ ಪ್ಲಾಸ್ಮಾ ದಾನ ಮಾಡಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾಳೆ.
ರಾಜ್ಯದಲ್ಲಿ ನಡೆಯುತ್ತಂತೆ ಪ್ಲಾಸ್ಮಾ ಥೆರಪಿ ಪ್ರಯೋಗ..
ಕೆಲ ದಿನಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಶೀಘ್ರದಲ್ಲಿ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿಯ ಪ್ರಯೋಗಗಳು ನಡೆಯುತ್ತವೆ ಎಂದು ಸ್ಪಷ್ಟನೆ ನೀಡಿದ್ದರು.
ಇದೇ ವೇಳೆ ಮಾತನಾಡಿದ್ದ ಡಾ.ಸುಧಾಕರ್ ''ಗಂಭೀರವಾಗಿ ಬಳಲುತ್ತಿರುವ ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆಯಿಂದ ಉಪಯೋಗವಾಗಲಿದ್ದು, ಅವರು ಆದಷ್ಟು ಬೇಗನೇ ಚೇತರಿಸಿಕೊಳ್ಳುತ್ತಾರೆ. ಮೊದಲಿಗೆ ಐಸಿಯುನಲ್ಲಿರುವ ಸೋಂಕಿತರ ಮೂರ್ನಾಲ್ಕು ದಿನಗಳಲ್ಲಿ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಾರೆ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗ ರಾಜ್ಯವೂ ಕೂಡಾ ಪ್ಲಾಸ್ಮಾ ಥೆರಫಿ ಪ್ರಯೋಗಕ್ಕೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಕೇಂದ್ರ ಸರ್ಕಾರದ ಅನುಮತಿ ಸಿಕ್ಕ ನಂತರ ರಾಜ್ಯದಲ್ಲಿ ಪ್ಲಾಸ್ಮಾ ಪ್ರಯೋಗ ಆರಂಭವಾಗಲಿದೆ.
ಈವರೆಗೂ ಎಲ್ಲೆಲ್ಲಿ ಪ್ಲಾಸ್ಮಾ ಪ್ರಯೋಗ..?
ಲಸಿಕೆ ಕಂಡುಹಿಡಿಯುಲು ಈಗಾಗಲೇ ಹಲವು ರಾಷ್ಟ್ರಗಳು ಯಶಸ್ವಿಯಾಗಿವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ಯಾವುದೇ ಲಸಿಕೆ ಈವರೆಗೂ ಕಂಡುಹಿಡಿಯಲಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಮಾ ಥೆರಪಿ ಮುನ್ನೆಲೆಗೆ ಬಂದಿದ್ದು, ಈಗಾಗಲೇ ಅಮೆರಿಕ ಸೇರಿದಂತೆ ಸುಮಾರು ರಾಷ್ಟ್ರಗಳು ಪ್ಲಾಸ್ಮಾ ಥೆರಫಿಯನ್ನು ಅಳವಡಿಕೊಂಡು ಸೋಂಕಿತರಿಗೆ ಚಿಕಿತ್ಸೆ ನೀಡಲು ಪ್ರಯೋಗ ನಡೆಸುತ್ತಿವೆ. ಎರಡು ದಿನಗಳ ಹಿಂದಷ್ಟೇ ಇಂಗ್ಲೆಂಡ್ ಪ್ಲಾಸ್ಮಾ ಥೆರಪಿಯನ್ನು ಅಧಿಕೃತ ಚಿಕಿತ್ಸಾ ವಿಧಾನ ಎಂದು ಘೋಷಿಸಿದೆ.
ಏನಿದು ಪ್ಲಾಸ್ಮಾ ಥೆರಪಿ..?
ಪ್ಲಾಸ್ಮಾ ಥೆರಪಿ ಇದೊಂದು ಚಿಕಿತ್ಸೆ ವಿಧಾನ. ಕೊರೊನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾವನ್ನು ತೆಗೆದು ಸೋಂಕಿತ ವ್ಯಕ್ತಿಯ ರಕ್ತಕ್ಕೆ ಸೇರಿಸಲಾಗುತ್ತದೆ. ಈ ಮೂಲಕ ವ್ಯಕ್ತಿಯ ದೇಹದ ಬಿಳಿ ರಕ್ತಕಣಗಳು ಸೋಂಕಿನ ವಿರುದ್ಧ ಹೋರಾಡಲು ಸನ್ನದ್ಧವಾಗುತ್ತವೆ. ಈ ಮೂಲಕ ಸೋಂಕಿತ ವ್ಯಕ್ತಿ ಮೂರ್ನಾಲ್ಕು ದಿನಗಳಲ್ಲಿ ಸೋಂಕಿನಿಂದ ಗುಣಮುಖನಾಗುತ್ತಾನೆ ಎಂದು ಸಂಶೋಧನೆಗಳು ಹೇಳುತ್ತದೆ.1890ರಲ್ಲೇ ಆರಂಭವಾಗಿದ್ದ ಈ ಥೆರಪಿಯಲ್ಲಿ ಕೊರೊನಾ ಮಾತ್ರವಲ್ಲದೇ ಸುಮಾರು 30 ಹೆಚ್ಚು ರೋಗಗಳಿಗೆ ಚಿಕಿತ್ಸೆ ನೀಡಬಹುದು.