ನವದೆಹಲಿ : ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳಲ್ಲಿ ತೃತೀಯ ಲಿಂಗಿಗಳ ಹಕ್ಕುಗಳನ್ನು ಸೇರಿಸಬೇಕೆಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ದಾಖಲಿಸಲಾಗಿದೆ. ಆ ಮೂಲಕ ತೃತೀಯ ಲಿಂಗಿಗಳ ಮೇಲೆ ದೈಹಿಕ ಹಲ್ಲೆಗೆ ದಂಡ ವಿಧಿಸವಂತೆ ಕೋರಲಾಗಿದೆ.
ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354ಎಯ ಉಪವಿಭಾಗ (1)ರ ಷರತ್ತು (i), (ii) ಮತ್ತು (iii)ನ್ನು ಮನವಿ ಪ್ರಶ್ನಿಸುತ್ತದೆ. 354 ಎಯ ಉಪವಿಭಾಗ 1 ಮಹಿಳೆಯರ ವಿರುದ್ಧ ಪುರುಷರ ಲೈಂಗಿಕ ಕಿರುಕುಳದ ಅಪರಾಧಗಳನ್ನು ಒಳಗೊಂಡಿದೆ. ಐಪಿಸಿ ಪ್ರಕಾರ, ಸೆಕ್ಷನ್ 354 ಎ ಅಡಿ ಶಿಕ್ಷೆಗೊಳಗಾದ ಯಾವುದೇ ವ್ಯಕ್ತಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡದೊಂದಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ತೃತೀಯ ಲಿಂಗಿಗಳನ್ನು ಇದರಿಂದ ಹೊರಗಿಡುವುದು ಅವರ ಆರ್ಟಿಕಲ್ 14 (ಕಾನೂನಿನ ಮುಂದೆ ಸಮಾನತೆಯ ಹಕ್ಕು), ಆರ್ಟಿಕಲ್ 15 (ತಾರತಮ್ಯವನ್ನು ನಿಷೇಧಿಸುವುದು) ಮತ್ತು ಆರ್ಟಿಕಲ್ 21ರ (ಜೀವಿಸುವ ಹಕ್ಕು) ಉಲ್ಲಂಘನೆ ಎಂದು ಪಿಐಎಲ್ನಲ್ಲಿ ತಿಳಿಸಲಾಗಿದೆ. ತೃತೀಯ ಲಿಂಗಿಗಳನ್ನು ರಕ್ಷಿಸಲು ಮತ್ತು ಅವರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸದಂತೆ ಅರ್ಜಿಯು ಹೆಚ್ಚಿನ ಮಾರ್ಗಸೂಚಿಗಳನ್ನು ರಚಿಸುವಂತೆ ಕೋರಿದೆ.