ನವದೆಹಲಿ : ಹಥ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಬಲಿಯಾದವರ ಗುರುತು ಬಹಿರಂಗಪಡಿಸಿದ ಆರೋಪದ ಹಿನ್ನೆಲೆ ದೆಹಲಿ ಹೈಕೋರ್ಟ್ ಹಲವಾರು ಸಾಮಾಜಿಕ ವೇದಿಕೆಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠವು ಈ ಆದೇಶ ನೀಡಿದೆ. ಟ್ವಿಟರ್, ಫೇಸ್‌ಬುಕ್ ಹಾಗೂ ಇತರೆ ಮಾಧ್ಯಮಗಳಲ್ಲಿ ಮಾಹಿತಿ ಬಹಿರಂಗ ಪಡಿಸಿದವರ ವಿರುದ್ಧ 1860ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 228ಎ ಅಡಿ ಉಲ್ಲಂಘನೆಯ ಕ್ರಮಗಳು ಅಪರಾಧವೆಂದು ಪರಿಗಣಿಸಿ ದೆಹಲಿ ಪೊಲೀಸರಿಗೆ ಪಿಐಎಲ್ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.
ಈ ಸಂಬಂಧ ನ್ಯಾಯಾಲಯವು ಫೆಬ್ರವರಿ 5ರಂದು ಮತ್ತೆ ವಿಚಾರಣೆ ನಡೆಸಲಿದೆ. ಇನ್ನು, ಸೆಪ್ಟೆಂಬರ್ 14, 2020ರಂದು ಉತ್ತರಪ್ರದೇಶದ ಹಥ್ರಾಸ್‌ನಲ್ಲಿ ಬಾಲಕಿಯ ಮೇಲೆ ನಾಲ್ವರು ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಎರಡು ವಾರಗಳ ಕಾಲ ತನ್ನ ಪ್ರಾಣಕ್ಕಾಗಿ ಹೋರಾಡಿದ ನಂತರ ಸಂತ್ರಸ್ತೆ ನವದೆಹಲಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.
ಈ ಘಟನೆಯ ನಂತರ ವಿವಿಧ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತೆಗೆ ಸಂಬಂಧಿಸಿದ ಮಾಹಿತಿ ಪ್ರಕಟಿಸಲಾಗಿತ್ತು. ಇದು ಆಕೆಯ ಗುರುತನ್ನು ಎಲ್ಲರಿಗೂ ತಿಳಿಯುವಂತೆ ಮಾಡಿತ್ತು. ಸಂತ್ರಸ್ತೆಯ ಗೌಪ್ಯತೆ ಹಕ್ಕನ್ನು ಉಲ್ಲಂಘಿಸಿದವರ ವಿರುದ್ಧ ಐಪಿಸಿ ಸೆಕ್ಷನ್ 228ಎ ಅಡಿ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಪೊಲೀಸರಿಗೆ ನಿರ್ದೇಶನ ಕೋರಿದೆ. ಆದರೆ, ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಅರ್ಜಿದಾರರು ನಿರ್ದೇಶನ ಕೋರಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪ್ರಕಟ ಮಾಡಿದ ಯಾವುದೇ ಮಾಹಿತಿಯನ್ನು ಹಿಂತೆಗೆದುಕೊಳ್ಳುವ ಹಾಗೆ ಯಾವುದೇ ವಸ್ತುಗಳಾಗಲಿ, ಸುದ್ದಿ ಲೇಖನ, ಸೋಷಿಯಲ್ ಮೀಡಿಯಾ ಪೋಸ್ಟ್ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಈ ಕಾನೂನು ನಿಬಂಧನೆಯ ಬಗ್ಗೆ ಜನರಿಗೆ ಅರಿವು ಮೂಡಿಸಲು ಕಾನೂನು ಜಾಗೃತಿ ಶಿಬಿರಗಳು, ಕಾನೂನು ಸಾಕ್ಷರತಾ ಶಿಬಿರಗಳು, ಉಪನ್ಯಾಸಗಳು, ಸಂವಾದಾತ್ಮಕ ಕಾರ್ಯಾಗಾರಗಳು, ವೃತ್ತಪತ್ರಿಕೆ ಜಾಹೀರಾತುಗಳು, ಹೋರ್ಡಿಂಗ್‌ಗಳನ್ನು ಆಯೋಜಿಸಲು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ.