ಹೊಸದಿಲ್ಲಿ; ದೇಶದಲ್ಲಿ ಮನೆ ಮನೆಗೆ ತೆರಳಿ ಕೋವಿಡ್-19 ಟೆಸ್ಟ್ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ದಾಖಲಿಸಲಾಗಿದೆ. ಸದ್ಯ ದೇಶದಲ್ಲಿ ಅತಿ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಹಾಗೂ ಸೀಲ್ ಮಾಡಲಾದ ಕೊರೊನಾ ಪೀಡಿತ ಪ್ರದೇಶಗಳಲ್ಲಿ ಆದ್ಯತೆಯ ಮೇರೆಗೆ ಮನೆ ಮನೆ ಟೆಸ್ಟಿಂಗ್ ಆರಂಭಿಸಬೇಕೆಂದು ಪಿಐಎಲ್ನಲ್ಲಿ ಕೋರಲಾಗಿದೆ.
ಟೆಸ್ಟಿಂಗ್ ಕಿಟ್ಗಳು, ಪಿಪಿಇಗಳನ್ನು ಸಂಗ್ರಹಿಸಲು ಹಾಗೂ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲು ಸಹಾಯವಾಗುವಂತೆ ಪಿಎಂಎನ್ಆರ್ಎಫ್, ಪಿಎಂ-ಕೇರ್ಸ್ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ವರ್ಗಾಯಿಸಬೇಕೆಂದು ಸಹ ಪಿಐಎಲ್ನಲ್ಲಿ ಮನವಿ ಮಾಡಲಾಗಿದೆ.
ಸಾಮಾಜಿಕ ಅಂತರ, ಲಾಕ್ಡೌನ್ ಹಾಗೂ ನಿರ್ದಿಷ್ಟ ಪ್ರಕರಣಗಳಲ್ಲಿ ಮಾತ್ರ ಟೆಸ್ಟಿಂಗ್ ಮಾಡುವುದು ಕತ್ತಲೆಯಲ್ಲಿ ಬಾಣ ಬಿಟ್ಟಂತಾಗಿದೆ. ಹೀಗಾಗಿ ಸಾಮೂಹಿಕ ಟೆಸ್ಟಿಂಗ್ ನಡೆಸಬೇಕೆಂದು ಅರ್ಜಿದಾರರಾದ ವಕೀಲ ಶಾಹ್ವತ್ ಆನಂದ, ಅಂಕುರ ಆಜಾದ್ ಹಾಗೂ ಫೈಜ್ ಅಹ್ಮದ್ ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಗತ್ಯ ಪ್ರಮಾಣದಲ್ಲಿ ಟೆಸ್ಟಿಂಗ್ ಮಾಡದ್ದರಿಂದ 130 ಕೋಟಿ ಜನರ ಪ್ರಾಣ ಅಪಾಯದಲ್ಲಿದೆ. ಇದು ಬದುಕುವ ಹಕ್ಕು ಹಾಗೂ ಆರೋಗ್ಯ ಹಕ್ಕಿನ ಉಲ್ಲಂಘನೆಯಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.