ನವದೆಹಲಿ: ನಿನ್ನೆಯಷ್ಟೆ ಸಂಸತ್ ಎದುರು ರಫೇಲ್ ಕುರಿತಾದ ವರದಿ ಸಲ್ಲಿಸಿರುವ ಸಿಎಜಿ ಇದೀಗ ಹೊಸ ಬಾಂಬ್ ಸಿಡಿಸಿದೆ. ರಫೇಲ್ ಆಯ್ಕೆಯಲ್ಲಿಯೇ ಸಿಎಜಿ ದೋಷ ಹುಡುಕಿದ್ದು, ಹಲವು ಹಂತಗಳಲ್ಲಿ ನಡೆದ ಪ್ರಕ್ರಿಯೆ ಬಗ್ಗೆ ಅಪಸ್ವರ ಎತ್ತಿದೆ.
ಸರ್ಕಾರ ರಫೇಲ್ ಯುದ್ಧ ವಿಮಾನಗಳ ಸಂಖ್ಯೆಯನ್ನು 36ಕ್ಕೆ ಇಳಿಸಿದಾಗ, ಭಾರತೀಯ ವಾಯುಪಡೆಗೆ ಕ್ಲಿಷ್ಟ ಪರಿಸ್ಥಿತಿ ಎದುರಾಗಿತ್ತು. ವಿಮಾನ ಆಯ್ಕೆಯಲ್ಲಿ ಸಾಕಷ್ಟು ಸಮಯ ವ್ಯರ್ಥವಾಯಿತು. ಅಲ್ಲದೆ, ಕೇಂದ್ರ ಜಾಗೃತ ಆಯೋಗ ನಿರ್ದೇಶನದಂತೆ, ಎರಡನೇ ಬಾರಿ ಬಿಡ್ ಮಾಡಿದ ಏರೋ ಪೈಟರ್ ತೂಫಾನ್ನೊಂದಿಗೆ ಸರಿಯಾದ ಮಾತುಕತೆ ನಡೆಯಲೇ ಇಲ್ಲ ಎಂದು ಹೇಳಲಾಗಿದೆ.
ಮೀಡಿಯಂ ಮಲ್ಟಿ ರೋಲ್ ಯುದ್ಧ ವಿಮಾನ (MMRCA) ಯೋಜನೆಯಡಿ ತಯಾರಾದ 18 ವಿಮಾನಗಳು ಹಾರಾಟದ ಸ್ಥಿತಿಯಲ್ಲಿದ್ದವು. ಉಳಿದವು ಪಿಎಸ್ಯು ಹಿಂದುಸ್ತಾನ್ ಏರೋನ್ಯಾಟಿಕ್ ಲಿ (HAL)ನಿಂದ ತಯಾರಾಗಲು ಲೈಸನ್ಸ್ ಪಡೆಯುವ ಹಂತದಲ್ಲಿದ್ದವು. ಆದರೆ ಈ ಎಲ್ಲ ಪ್ರಕ್ರಿಯೆಗಳನ್ನು 2015 ಜೂನ್ನಲ್ಲಿ ಎನ್ಡಿಎ ಸರ್ಕಾರ ರದ್ದು ಮಾಡಿತು. ಅಂತೆಯೇ, 2016 ಸೆಪ್ಟೆಂಬರ್ನಲ್ಲಿ ಫ್ರಾನ್ಸ್ನೊಂದಿಗೆ ಅಂತರ ಸರ್ಕಾರಿ ಒಪ್ಪಂದವೂ ಜರುಗಿತು. ಯುಪಿಎ ಸರ್ಕಾರದ ಅವಧಿಯಲ್ಲಿ MMRCA ಯೋಜನೆಯು ಅಂತಿಮ ರೂಪ ಪಡೆಯದ ಕಾರಣ ಎನ್ಡಿಎ ಸರ್ಕಾರ 59,000 ಕೋಟಿ ರೂಗಳ ರಫೇಲ್ ಒಪ್ಪಂದಕ್ಕೆ ಮುಂದಾಗುವಂತಾಯಿತು ಎಂದು ವಿವರಿಸಿದೆ.
ಸ್ವೀಡಿಷ್ನ Gripen-E, ರಷ್ಯಾದ MiG-35 ಹಾಗೂ fighters ಗಳು ಟ್ರಯಲ್ ನೋಡುವ ಹಂತದಲ್ಲಿ ತಿರಸ್ಕೃತಗೊಂಡವು. ಕಡಿಮೆ ಬಿಡ್ ಮಾಡಿದ ಕಾರಣ ರಫೇಲ್ ಅನ್ನು ಆಯ್ಕೆ ಮಾಡಿಕೊಳ್ಳಲಾಯಿತು. ನಿಜಾಂಶವೇನೆಂದರೆ, ದಸಾಲ್ಟ್ ಏವಿಯೇಷನ್ನ ಕಡಿಮೆ ಬಿಡ್ ಬಹುಕಾಲ ಉಳಿಯಲಿಲ್ಲ ಎಂದಿದೆ.
ದಸಾಲ್ಟ್ ತಾಂತ್ರಿಕವಾಗಿ ಹಾಗೂ ಬೆಲೆಯಲ್ಲಿ ಗಣನೀಯವಾಗಿ ಪರಿವರ್ತನೆ ಮಾಡುತ್ತಾ ರಕ್ಷಣಾ ಇಲಾಖೆ ಪ್ರಕ್ರಿಯೆಗಳ ನಿಯಮ ಉಲ್ಲಂಘಿಸಿತು. ಫೀಲ್ಡ್ ಟ್ರಯಲ್ನಲ್ಲಿ ರಫೇಲ್ ಕೂಡ ಸೋತಿದ್ದರೂ ದೂರುಗಳಿಲ್ಲದ ಬಿಡ್ ಸಲ್ಲಿಸಿತು. ದರದ ಮೌಲ್ಯಮಾಪನಕ್ಕೆ ಒಟ್ಟು ಮೊತ್ತದ ಬಿಡ್ ಅನ್ನು ಸೂಚಿಸಲಾದ ರೀತಿಯಲ್ಲಿ ದಸಾಲ್ಟ್ ಸಲ್ಲಿಸಿಯೇ ಇಲ್ಲ. ದಸಾಲ್ಟ್ನ ಬಿಡ್ ಮೌಲ್ಯಮಾಪನ ಮಾಡುವಲ್ಲಿ ಕಂಟ್ರಾಕ್ಟ್ ನೆಗೋಷಿಯೇಷನ್ ಕಮಿಟಿ (CNC)ಯು ಡೈರೆಕ್ಟ್ ಕಾಸ್ಟ್ ಆಫ್ ಅಕ್ವಿಸಿಷನ್ ಪ್ರಕ್ರಿಯೆಯಲ್ಲಿ ಸಮಾನ ಸ್ಥಿತಿ ಪಾಲಿಸಿಲ್ಲ ಎಂದು ವಿವರಿಸಿದೆ.
ಮುಖ್ಯವಾಗಿ, ದಸಾಲ್ಟ್ ಮಾತುಕತೆ ವೇಳೆ ಮೊದಲ 18 ವಿಮಾನಗಳಿಗೆ ಮಾತ್ರ ಗ್ಯಾರಂಟಿ ನೀಡುವುದಾಗಿ ಹೇಳಿತ್ತು. ಆದರೆ ಹೆಚ್ಎಲ್ 108 ವಿಮಾನಗಳ ಗುಣಮಟ್ಟಕ್ಕೆ ತಾನು ಜವಾಬ್ದಾರಿ ಎಂದು ಹೇಳಿತ್ತು. CNCಯು ದಸಾಲ್ಟ್ಗೆ 126 ವಿಮಾನಗಳ ಗುಣಮಟ್ಟದ ಹೊಣೆ ಹೊರುವಂತೆ ಸೂಚಿಸಿದ ಮಾತುಕತೆಯೇ ಬಿದ್ದುಹೋಗಿತ್ತು ಎಂದು ಹೇಳಿದೆ.