ಕೋಟಾ/ರಾಜಸ್ಥಾನ: ಏರ್ ಕೂಲರ್ ಆನ್ ಮಾಡಲು ವಾರ್ಡ್ಬಾಯ್ ಒಬ್ಬ ವೆಂಟಿಲೇಟರ್ಗೆ ಕನೆಕ್ಟ್ ಆಗಿದ್ದ ವಿದ್ಯುತ್ ಪ್ಲಗ್ ಕಿತ್ತ ಪರಿಣಾಮ ರೋಗಿ ಸಾವನ್ನಪ್ಪಿರುವ ಘಟನೆ ಕೋಟಾದ ಮಹರಾವ್ ಭೀಮ್ಸಿಂಗ್ ಆಸ್ಪತ್ರೆಯಲ್ಲಿ ನಡೆದಿದೆ.
ರೋಗಿಯನ್ನು ನೋಡಿಕೊಳ್ಳುತ್ತಿದ್ದ ವಾರ್ಡ್ ಬಾಯ್ ವೆಂಟಿಲೇಟರ್ಗೆ ಕನೆಕ್ಟ್ ಆಗಿದ್ದ ವಿದ್ಯುತ್ ಪ್ಲಗ್ ಕಿತ್ತಿದ್ದಾನೆ. ಬಳಿಕ ವೆಂಟಿಲೇಟರ್ಗೆ ವಿದ್ಯುತ್ ಪೂರೈಕೆ ನಿಂತು ಹೋಗಿದೆ. ಇದರಿಂದಾಗಿ ವೆಂಟಿಲೇಟರ್ ಕೆಲಸ ಸ್ಥಗಿತಗೊಂಡ ಪರಿಣಾಮ ಉಸಿರಾಡಲು ಸಾಧ್ಯವಾಗದೇ ವಿನೋದ್ ಎಂಬ ರೋಗಿ ಮೃತಪಟ್ಟಿದ್ದಾನೆ.
ಮೂಲಗಳ ಪ್ರಕಾರ ವಿದ್ಯುತ್ ಸಂಪರ್ಕ ಕಡಿತಗೊಂಡ ಬಳಿಕವೂ ಬ್ಯಾಟರಿ ಸಹಾಯದಿಂದ ವೆಂಟೆಲೇಟರ್ ಅರ್ಧ ಗಂಟೆವರೆಗೆ ಕೆಲಸ ಮಾಡಿದೆ. ಆದರೆ ಅರ್ಧ ಗಂಟೆ ನಂತರ ಬ್ಯಾಟರಿ ಚಾರ್ಜ್ ಕೂಡ ಖಾಲಿಯಾಗಿ ವೆಂಟಿಲೇಟರ್ ಕೆಲಸ ನಿಲ್ಲಿಸಿದೆ ಎಂದು ತಿಳಿದು ಬಂದಿದೆ. ನಂತರ ರೋಗಿ ಉಸಿರಿನ ಏರಿಳಿತ ಕಂಡ ವಾರ್ಡ್ ಬಾಯ್ ವೈದ್ಯರನ್ನು ಕರೆದಿದ್ದಾನೆ. ಆದರೆ ಅಷ್ಟರಲ್ಲಾಗಲೇ ವಿನೋದ್ ಉಸಿರಾಟ ನಿಂತಿತ್ತು ಎನ್ನಲಾಗ್ತಿದೆ.
ಘಟನೆಗೆ ಕಾರಣ ತಿಳಿದ ವೈದ್ಯರು ವಾರ್ಡ್ ಬಾಯ್ನ ಅಜಾಗರೂಕತೆಯಿಂದ ಈ ಪ್ರಮಾದ ಜರುಗಿದೆ ಎಂದು ಆರೋಪಿಸಿದ್ದಾರೆ. ಆದರೆ ವಾರ್ಡ್ ಬಾಯ್ ಈ ಆರೋಪ ತಳ್ಳಿಹಾಕಿದ್ದು, ವೈದ್ಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.