ನವದೆಹಲಿ: ಕೋವಿಡ್-19 ರೋಗಿಗಳ ಮೇಲೆ ಪತಂಜಲಿಯ ಆಯುರ್ವೇದಿಕ್ ಔಷಧ ಪ್ರಯೋಗಕ್ಕೆ ಇಂದೋರ್ ಜಿಲ್ಲಾಡಳಿತ ಅನುಮತಿ ನೀಡಿರುವ ಕುರಿತು ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್, ದೇಶದ ಡ್ರಗ್ ಕಂಟ್ರೋಲರ್ ಅನುಮತಿ ಇಲ್ಲದೇ ಪತಂಜಲಿಯ ಆಯುರ್ವೇದವನ್ನು ಕೋವಿಡ್-19 ಸೋಂಕಿತರ ಮೇಲೆ ಪ್ರಯೋಗಕ್ಕೆ ಇಂದೋರ್ ಡಿಸಿ ಮನೀಷ್ ಸಿಂಗ್ ಅನುಮತಿ ನೀಡಿದ್ದಾರೆ. ಈ ವರದಿ ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದಾರೆ.
ಪತಂಜಲಿ ಪ್ರಸ್ತಾಪಕ್ಕೆ ಅನುಮತಿ ನೀಡಿರುವುದು ಗೊಂದಲದಿಂದ ಕೂಡಿದೆ. ಮಾರ್ಗ ಸೂಚಿಗಳ ಬಗ್ಗೆ ಅವರಿಗೆ ಅರಿವೇ ಇಲ್ಲದಂತಿದೆ. ಇಂದೋರ್ ಜನರನ್ನು ಇಲಿಗಳು ಅಂತ ತಿಳಿದುಕೊಂಡಿರಬೇಕು. ಡಿಸಿ ತಮ್ಮ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಮೇ 23 ರಂದು ಸಿಂಗ್ ಟ್ವೀಟ್ ಮಾಡಿದ್ರು.
ಹೊಸ ಔಷಧವನ್ನ ಅನುಮೋದಿಸಲು ಮಾರ್ಗಸೂಚಿಗಳಿವೆ. ಈ ಮಾರ್ಗಸೂಚಿ ಔಷಧದ ನಿಯಂತ್ರಣದ ಅಗತ್ಯವನ್ನು ಆಧರಿಸಿದೆ. ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಅಡಿ ಮಾತ್ರ ಔಷಧವನ್ನು ಮಾನವರ ಮೇಲೆ ಪರೀಕ್ಷಿಸಬಹುದು. ಪತಂಜಲಿ ತನ್ನ ಉತ್ಪನ್ನಗಳಿಗೆ ಅನುಮೋದನೆ ಪಡೆದಿದೆಯೇ? ಒಂದು ವೇಳೆ ಅನುಮತಿ ಪಡೆಯದಿದ್ದರೆ ಕಾನೂನನ್ನು ಉಲ್ಲಂಘಿಸಿದಂತಾಗುತ್ತದೆ. ಈ ಸಂಬಂಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪತಂಜಲಿ ರಿಸರ್ಚ್ ಫೌಂಡೇಷನ್ ಟ್ರಸ್ಟ್ ತನ್ನ ಆಯುರ್ವೇದವನ್ನು ಕೋವಿಡ್-19 ಸೋಂಕಿತರ ಮೇಲೆ ಪ್ರಯೋಗಕ್ಕೆ ಅನುಮತಿ ಕೋರಿತ್ತು.