ಚಮೋಲಿ (ಉತ್ತರಾಖಂಡ): ಕೇದಾರನಾಥ ಧಾಮ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಉತ್ತರಾಖಂಡ ಸರ್ಕಾರದ ಜೊತೆಗೆ ಭಾರತೀಯ ವಾಯುಪಡೆ ಕೈಜೋಡಿಸಿದೆ. ಕೆಲವೊಂದು ಸಾಮಗ್ರಿಗಳನ್ನು ಸಾಗಿಸಲು ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಜೆಸಿಬಿಯ ಭಾಗಗಳು, ಟ್ರಕ್ಗಳನ್ನು ಕೇದಾರಧಾಮ ನಿರ್ಮಾಣ ಸ್ಥಳಕ್ಕೆ ಗೌಚಾರ್ ವಾಯುನೆಲೆಯಿಂದ ಚಿನೂಕ್ ಹೆಲಿಕಾಪ್ಟರ್ಗಳ ಮುಖಾಂತರ ಸಾಗಿಸಲಾಗುತ್ತಿದೆ. ಈಗಾಗಲೇ ಕಾರ್ಯ ಆರಂಭ ಮಾಡಿರುವ ಹೆಲಿಕಾಪ್ಟರ್ಗಳು ಟ್ರ್ಯಾಕ್ಟರ್ ಹಾಗೂ ಟ್ರಕ್ಗಳನ್ನು ಸಾಗಿಸಿವೆ.
ಈಗಾಗಲೇ ಕೆಲವು ಯಂತ್ರಗಳ ಎರಡೂವರೆ ಟನ್ ಬಿಡಿಭಾಗಗಳನ್ನು ಕೇದಾರಧಾಮ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಕರ್ಣಪ್ರಯಾಗ್ ತಹಶೀಲ್ದಾರ್ ಸೋಹನ್ ಸಿಂಗ್ ರಂಗದ್ ಪ್ರತಿಕ್ರಿಯೆ ನೀಡಿದ್ದಾರೆ.
ಮುರು ದಿನಗಳಲ್ಲಿ ಹಲವಾರು ರೀತಿಯ ಬಿಡಿ ಭಾಗಗಳನ್ನು ಸಾಗಿಸಲಾಗಿದ್ದು, ಅವುಗಳನ್ನು ನಂತರ ಕೇದಾರಧಾಮ ಕಾಮಗಾರಿ ಸ್ಥಳದಲ್ಲಿ ಜೋಡಿಸಿಕೊಳ್ಳಲಾಗುವುದು ಎಂದು ತಹಶೀಲ್ದಾರ್ ಸ್ಪಷ್ಟನೆ ನೀಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಯಂತ್ರಗಳನ್ನು ಸಾಗಿಸಲಾಗುತ್ತಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.