ನವದೆಹಲಿ: ದತ್ತಾಂಶ ಉಲ್ಲಂಘನೆ ಪರಿಶೀಲಿಸಲು ಮೊಬೈಲ್ ಅಪ್ಲಿಕೇಶನ್ ಆಧಾರಿತ ಕಂಪನಿಗಳು ತಮ್ಮ ಪ್ರೋಟೋಕಾಲ್‌ಗಳ ಬಗ್ಗೆ ವಿವರಗಳನ್ನು ನೀಡುವಂತೆ ಜಂಟಿ ಸಂಸದೀಯ ಸಮಿತಿ ಕೇಳಿದೆ.
ಮೂಲಗಳ ಪ್ರಕಾರ ಬಿಜೆಪಿ ಸದಸ್ಯೆ ಮೀನಾಕ್ಷಿ ಲೆಖಿ ಅವರ ಅಧ್ಯಕ್ಷತೆಯ ದತ್ತಾಂಶ ಸಂರಕ್ಷಣಾ ಮಸೂದೆ 2019 ಸಂಸತ್ತಿನ ಜಂಟಿ ಸಮಿತಿಯು ಟೆಲಿಕಾಂ ಆಪರೇಟರ್ ಏರ್‌ಟೆಲ್ ಮತ್ತು ಕಾಲರ್ ಐಡಿ ಮತ್ತು ಸ್ಪ್ಯಾಮ್ ಬ್ಲಾಕಿಂಗ್ ಸೇವೆಯ ಟ್ರೂಕಾಲರ್ ಪ್ರತಿನಿಧಿಗಳಿಂದ ವಿವರವಾದ ಮಾಹಿತಿ ಕೋರಿದೆ.
ಸಂಸದೀಯ ಸಮಿತಿಯು ಕಂಪನಿಯು ಬಳಕೆದಾರರಿಂದ ಯಾವ ಡೇಟಾ ಸಂಗ್ರಹಿಸುತ್ತದೆ ಮತ್ತು ಅದನ್ನು ಎಲ್ಲಿ ಸಂಗ್ರಹಿಸುತ್ತದೆ ಎಂದು ವಿವರ ಕೇಳಿದೆ. ಈ ಸಮಿತಿಯು ಈ ಮೊದಲು ಸಾಮಾಜಿಕ ಮಾಧ್ಯಮ , ಪ್ಲಾಟ್‌ಫಾರ್ಮ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಆಧಾರಿತ ಕಂಪನಿಗಳಿಂದ ಡೇಟಾ ಉಲ್ಲಂಘನೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ಇದಕ್ಕೆ ಉತ್ತರಿಸಿರುವ ಕಂಪನಿಗಳು, ಡೇಟಾವನ್ನು ಸ್ಥಳೀಕರಿಸುತ್ತೇವೆ ಮತ್ತು ಅದು ಪ್ರತಿಕ್ರಿಯೆ ನೀಡುವ ಸಮಯವನ್ನು ಕಡಿಮೆ ಮಾಡಿ ಉತ್ತಮ ಸೇವೆಗಳನ್ನು ನೀಡಲು ಸಹಾಯ ಮಾಡುತ್ತದೆ ಎಂದು ತಿಳಿಸಿವೆ. ಅಲ್ಲದೇ ಡೇಟಾ ಬಳಕೆದಾರರು ಕಾರ್ಯನಿರ್ವಹಿಸುವ ದೇಶಗಳಲ್ಲಿ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಎಂದು ಕಂಪನಿಗಳು ಹೇಳಿವೆ.
ಮೂಲಗಳ ಪ್ರಕಾರ, ಸಮಿತಿಯು ಈವರೆಗೆ ನಿರ್ವಹಿಸಿದ ದತ್ತಾಂಶಗಳ ಬಗ್ಗೆ ಕಂಪನಿಗಳನ್ನು ಕೇಳಿದೆ ಮತ್ತು ಅವುಗಳನ್ನು ಸಹ ಸುರಕ್ಷಿತವಾಗಿರುವಂತೆ ತಿಳಿಸಿದೆ. ಆದರೆ, ಇದನ್ನು ಡೇಟಾ ಸಂರಕ್ಷಣಾ ಕಾಯ್ದೆಯಿಂದ ಇದನ್ನು ಹೊರಗಿಡಬೇಕು ಎಂದು ಕಂಪನಿಗಳು ಕೇಳಿವೆ.
ಭಾರತ ಹಾಗೂ ಪ್ರಪಂಚಾದ್ಯಂತ ಹೆಚ್ಚಿನ ಬಳಕೆದಾರರಿಗೆ ಸುರಕ್ಷತೆ ಮತ್ತು ವೈಯಕ್ತಿಕ ದತ್ತಾಂಶ ಸಂರಕ್ಷಣೆಯ ಬಗ್ಗೆ ಯಾವುದೇ ತಿಳಿವಳಿಕೆ ಇಲ್ಲ ಎಂದು ಸಮಿತಿಯ ಬಹುತೇಕ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಬಳಕೆದಾರರು ಒಪ್ಪಿಗೆ ನೀಡದಿದ್ದರೆ, ಅವರಿಗೆ ಸೇವೆಗಳನ್ನು ಬಳಸಲು ಸಾಧ್ಯವಾಗುವುದಿಲ್ಲ ಎಂದು ಸದಸ್ಯರು ಹೇಳಿದ್ದಾರೆ. ಇದೇ ವೇಳೆ, ಡೇಟಾವನ್ನು ಜಾಹೀರಾತಿಗಾಗಿ ಅಥವಾ ಇನ್ನಾವುದೇ ಕಾರಣಕ್ಕಾಗಿ ಬಳಸಲಾಗುತ್ತಿದೆಯೇ ಎಂದು ತಿಳಿಯಲು ಸಮಿತಿ ಪ್ರಯತ್ನಿಸಿದೆ.
ಟ್ವಿಟರ್, ಫೇಸ್‌ಬುಕ್, ಅಮೆಜಾನ್, ಪೇ ಟಿಎಂ, ಗೂಗಲ್, ರಿಲಯನ್ಸ್ ಜಿಯೋ, ಓಲಾ, ಮತ್ತು ಉಬರ್ ಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಸಮಿತಿಯ ಮುಂದೆ ಮಂಡಿಸಿದ್ದಾರೆ.
ಇನ್ನು ಜನರ ವೈಯಕ್ತಿಕ ದತ್ತಾಂಶಗಳ ರಕ್ಷಣೆಗಾಗಿ ದತ್ತಾಂಶ ಸಂರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸುವ ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆಯನ್ನು ಲೋಕಸಭೆಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ , ಕಳೆದ ಡಿಸೆಂಬರ್ 11 ರಂದು ಮಂಡಿಸಿದರು. ನಂತರ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಪರಿಶೀಲನೆಗೆ ವರ್ಗಾಯಿಸಲಾಯ್ತು.