ತೆಲಂಗಾಣ: ವ್ಯಕ್ತಿಯೊಬ್ಬ ಸೀಮೆ ಎಣ್ಣೆ ಸುರಿದು ತನ್ನ ಪ್ರಿಯತಮೆಯನ್ನು ಸುಟ್ಟು, ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಮೃತಪಟ್ಟಿರುವ ಘಟನೆ ತೆಲಂಗಾಣದ ವಿಕಾರಬಾದ್ನಲ್ಲಿ ಶುಕ್ರವಾರ ನಡೆದಿದೆ.
ನರಸಿಂಹುಲು ಹಾಗೂ ಅಂಜಲಮ್ಮ ಅನೇಕ ವರ್ಷಗಳಿಂದ ಸಂಬಂಧ ಹೊಂದಿದ್ದು, ಬಳಿಕ ಯಾರಿಗೂ ತಿಳಿಯದಂತೆ ಮದುವೆಯಾಗಿದ್ದರು. ವಿಷಯ ತಿಳಿದ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧಿಸಿದ್ದಾರೆ. ಕೆಲ ದಿನಗಳಿಂದ ಅಂಜಲಮ್ಮ, ನರಸಿಂಹುಲುರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದ್ದು, ಇದರಿಂದ ಕೋಪಗೊಂಡಿದ್ದ ಆತ ಆಕೆಯ ಮನೆಗೆ ತೆರಳಿ ಅಂಜಲಮ್ಮ ಹಾಗೂ ಪೋಷಕರ ಜೊತೆ ಗಲಾಟೆ ನಡೆಸಿದ್ದಾನೆ. ಈ ವೇಳೆ ನರಸಿಂಹುಲು ತನ್ನ ಜೊತೆ ಸೀಮೆ ಎಣ್ಣೆಯನ್ನೂ ತೆಗೆದುಕೊಂಡು ಹೋಗಿದ್ದು, ಅಂಜಲಮ್ಮ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ತಾನೂ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ ಎಂದು ವಿಕಾರಬಾದ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನರಸಿಂಹುಲುವಿಗೆ ಶೇ.90 ರಷ್ಟು ಹಾಗೂ ಅಂಜಲಮ್ಮನಿಗೆ ಶೇ.80 ರಷ್ಟು ಸುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಮೃತಪಟ್ಟಿದ್ದಾರೆ. ಇನ್ನು ಘಟನೆ ವೇಳೆ ಮಗಳನ್ನು ರಕ್ಷಿಸಲು ಹೋದ ಆಕೆಯ ತಂದೆ-ತಾಯಿಗೆ ಕೂಡ ಶೇ.30-40 ರಷ್ಟು ಸುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಐಪಿಸಿ ಸೆ.307 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.