ಇಸ್ಲಮಾಬಾದ್: ಪ್ರಧಾನಿ ಮೋದಿಗೆ ಯುಎಇ ಸರ್ಕಾರ ಇಸ್ಲಾಮಿಕ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ದಿ ಆರ್ಡರ್ ಆಫ್ ಜಾಯೆದ್' ನೀಡಿ ಗೌರವಿಸಿದ್ದಕ್ಕೆ ಪಾಕಿಸ್ತಾನದ ಸೆನೆಟ್ ಅಧ್ಯಕ್ಷ ಸಾದಿಕ್ ಸಂಜ್ರಾಣಿ ತಮ್ಮ ಯುಎಇ ಭೇಟಿ ರದ್ದು ಮಾಡಿದ್ದಾರೆ ಎನ್ನಲಾಗಿದೆ.
ಯುಎಇ ಸರ್ಕಾರದ ಆಹ್ವಾನದ ಮೇರೆಗೆ ಸಂಸದೀಯ ನಿಯೋಗದೊಂದಿಗೆ ಆಗಸ್ಟ್ 25 ರಿಂದ ಆಗಸ್ಟ್ 28 ರವರೆಗೆ ಯುಎಇಗೆ ಸಂಜ್ರಾಣಿ ಭೇಟಿ ನೀಡಬೇಕಿತ್ತು. ಯುಎಇ ಸಂಸದರು ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಭೆ ನಿಗದಿಯಾಗಿತ್ತು.
ಕಾಶ್ಮೀರದ ಜನರನ್ನ ತೀವ್ರವಾಗಿ ಬೆಂಬಲಿಸುತ್ತಿರುವ ಪಾಕಿಸ್ತಾನ ತನ್ನ ಯುಎಇ ಭೇಟಿಯನ್ನ ರದ್ದುಗೊಳಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೆಚ್ಚಿಸುವ ಪ್ರಯತ್ನ ಮಾಡಿದ ಪ್ರಧಾನಿ ನರೇಂದ್ರ ಮೋದಿಗೆ ಯುಎಇ ಸರ್ಕಾರ ಇಸ್ಲಾಮಿಕ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ದಿ ಆರ್ಡರ್ ಆಫ್ ಜಾಯೆದ್' ನೀಡಿ ಗೌರವಿಸಿತ್ತು.