ನವದೆಹಲಿ: ಪಾಕಿಸ್ತಾನದಿಂದ ವಲಸೆ ಬಂದ ಕುಟುಂಬಗಳು ಭಾರತದಲ್ಲಿ ಶಾಶ್ವತ ಆಶ್ರಯ ಪಡೆಯುತ್ತಿದ್ದಾರೆ. ಆದರೆ, ಪಾಕಿಸ್ತಾನದಲ್ಲಿ ವಾಸಿಸುವ ಮುಸ್ಲಿಮೇತರರು ಕಿರುಕುಳ ಎದುರಿಸುತ್ತಿದ್ದಾರೆ ಎಂಬ ಭಯಾನಕ ಸತ್ಯವನ್ನು ಅಲ್ಲಿ ವಾಸ ಮಾಡುತ್ತಿದ್ದವರೇ ಹೇಳಿದ್ದಾರೆ.
ಪಾಕಿಸ್ತಾನದಲ್ಲಿ ಮುಸ್ಲಿಮೇತರನಾಗಿ ಜೀವನ ಮಾಡುವುದು ಶಿಕ್ಷಾರ್ಹ ಅಪರಾಧ ಎನ್ನವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ನೋವು ತೋಡಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಪಾಕಿಸ್ತಾನದಿಂದ ಬಂದ ಹಿಂದೂ ಮತ್ತು ಸಿಖ್ ಕುಟುಂಬಗಳು ತಮ್ಮ ನೋವನ್ನು ತೋಡಿಕೊಂಡಿವೆ. ಈ ಕುಟುಂಬ ಮತ್ತೆ ಪಾಕಿಸ್ತಾನಕ್ಕೆ ಹೋಗಲು ಹಿಂಜರಿಯುತ್ತಿದ್ದು, ಭಾರತದಲ್ಲೇ ಉಳಿಯುವುದಾಗಿ ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ನೆರೆಯ ರಾಷ್ಟರದಿಂದ ಬಂದ ಭರತ್ ಎಂಬ 9ನೇ ತರಗತಿ ಓದುತ್ತಿರುವ ಬಾಲಕ ಪಾಕಿಸ್ತಾನದ ಕ್ರೂರತ್ವವನ್ನು ವಿವರಿಸಿದ್ದಾನೆ. ಅಲ್ಲಿ ಮುಸ್ಲಿಂ ಅಲ್ಲದವರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ಹೇಳಿದ್ದಾನೆ. ಪಾಕಿಸ್ತಾನದ ಹಿಂದೂಗಳಿಗೆ ನಿಯಮಗಳು ವಿಭಿನ್ನವಾಗಿವೆ. ಹಿಂದೂ ಜನರನ್ನು ಬಲವಂತವಾಗಿ ಅಪಹರಿಸಿ ಇಸ್ಲಾಂಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದಿದ್ದಾನೆ.
ಫೆಬ್ರವರಿ 4 ರಂದು ಭರತ್ ತಮ್ಮ ಇಬ್ಬರು ಸಹೋದರರು ಹಾಗೂ ಕೆಲವು ಮಂದಿ ಜೊತೆ ಭಾರತಕ್ಕೆ ಬಂದಿದ್ದಾರೆ.ಇವರು ಸರ್ಕಾರಕ್ಕೆ ಮನವಿ ಮಾಡಿದ್ದು, ಭಾರತದಲ್ಲಿ ವಾಸಿಸಲು ಸ್ವಲ್ಪ ಸ್ಥಳವನ್ನು ಒದಗಿಸುವಂತೆ ಕೇಳಿಕೊಂಡಿದ್ದಾರೆ.
2013 ರಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಬಂದ ಕೃಷ್ಣ ಎಂಬುವರು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಪರಿಸ್ಥಿತಿ ಇನ್ನೂ ಹಾಗೇ ಇದೆ. ಹಿಂದೂ ಮಹಿಳೆಯರು ಭಾರಿ ದೌರ್ಜನ್ಯ ಎದುರಿಸುತ್ತಿದ್ದಾರೆ,ಅವರಿಗೆ ಸುರಕ್ಷತೆ ಒದಗಿಸಲು ರಾಷ್ಟ್ರದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಇಲ್ಲ ಎಂದು ಹೇಳಿದರು.
ಈ ಸಮಯದಲ್ಲಿ ಭಾರತದಲ್ಲಿ ಆಶ್ರಯ ಪಡೆಯುವುದೇ ನಮಗೆ ಇರುವ ದಾರಿ. ಹೊಸದಾಗಿ ತಿದ್ದುಪಡಿ ಮಾಡಲಾದ ಪೌರತ್ವ ತಿದ್ದುಪಡಿ ಕಾಯ್ದೆಯು ಅನೇಕ ನಿರ್ಗತಿಕರಿಗೆ ಸಹಾಯ ಮಾಡುತ್ತದೆ. ಈ ಹಿನ್ನೆಲೆ ಅಲ್ಲಿಂದ ಬಂದ ನಿರ್ಗತಿಕರು ಈ ಕಾಯ್ದೆಯಿಂದ ನೆಮ್ಮದಿ ಜೀವನ ಮಾಡಲು ಸಾಧ್ಯ ಎಂದಿದ್ದಾರೆ.