ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಕಥುವಾ ಜಿಲ್ಲೆಯಲ್ಲಿನ ಅಂತಾರಾಷ್ಟ್ರೀಯ ಗಡಿ ಬಳಿ ಭದ್ರತಾ ಸಿಬ್ಬಂದಿ ಹಾಗೂ ಗ್ರಾಮಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನಿ ಪಡೆ ಕದನ ವಿರಾಮ ಉಲ್ಲಂಘಿಸಿದೆ.
ಇಂದು ನಡುರಾತ್ರಿ 12.45ಕ್ಕೆ ಕರೋಲ್ ಮಾತ್ರೈ ಮತ್ತು ಚಾಂದ್ವಾ ಗ್ರಾಮಗಳ ಬಳಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹಾಗೂ ಪಾಕ್ ಪಡೆ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಮುಂಜಾನೆ 3 ಗಂಟೆಯ ವರೆಗೂ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದ್ದು, ಯಾವುದೇ ಪ್ರಾಣಹಾನಿ ಕುರಿತು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಭಯಭೀತರಾದ ಗಡಿ ಪ್ರದೇಶದ ಜನರು ರಾತ್ರಿಯಿಡೀ ಭೂಗತ ಬಂಕರ್ಗಳಲ್ಲಿ ಕಾಲ ಕಳೆದಿದ್ದಾರೆ.