ಇಸ್ಲಾಮಾಬಾದ್: ಭಾರತ ಮತ್ತು ಪಾಕಿಸ್ತಾನ ಇಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಇಸ್ಲಾಮಾಬಾದ್ ಮತ್ತು ನವದೆಹಲಿಯಲ್ಲಿ ಏಕಕಾಲಕ್ಕೆ ತಮ್ಮ ತಮ್ಮ ವಶದಲ್ಲಿರುವ ನಾಗರಿಕ ಕೈದಿಗಳ ಮತ್ತು ಮೀನುಗಾರರ ಪಟ್ಟಿಯನ್ನು ಪರಸ್ಪರ ವಿನಿಮಯ ಮಾಡಿಕೊಂಡಿವೆ.
ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ ದೇಶದ ಜೈಲುಗಳಲ್ಲಿ ದಾಖಲಾದ 49 ನಾಗರಿಕ ಮತ್ತು 270 ಮೀನುಗಾರರು ಸೇರಿದಂತೆ 319 ಭಾರತೀಯ ಕೈದಿಗಳ ಪಟ್ಟಿಯನ್ನು ಪಾಕಿಸ್ತಾನ ಶುಕ್ರವಾರ ಹಸ್ತಾಂತರಿಸಿದೆ. 2008ರ ಒಪ್ಪಂದದ ನಿಬಂಧನೆಗಳಿಗೆ ಅನುಗುಣವಾಗಿ ಉಭಯ ದೇಶಗಳು ಸಹಿ ಹಾಕಿವೆ ಎಂದು ವಿದೇಶಾಂಗ ಕಚೇರಿ (ಎಫ್‌ಒ) ಹೇಳಿದೆ.
ಪಾಕಿಸ್ತಾನ ಸರ್ಕಾರ ಇಂದು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನರ್ನೊಂದಿಗೆ 319 ಭಾರತೀಯ ಕೈದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 49 ನಾಗರಿಕರು ಮತ್ತು 270 ಮೀನುಗಾರರು ಸೇರಿದ್ದಾರೆ ಎಂದು ಪಾಕ್ ವಿದೇಶಾಂಗ ಕಚೇರಿ ತಿಳಿಸಿದೆ.
ಭಾರತ ಸರ್ಕಾರವು ಸಹ 340 ಪಾಕಿಸ್ತಾನಿ ಕೈದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 263 ನಾಗರಿಕರು ಮತ್ತು 77 ಮೀನುಗಾರರಿದ್ದು ನವದೆಹಲಿಯಲ್ಲಿರುವ ಪಾಕಿಸ್ತಾನದ ಹೈಕಮಿಷನರ್ಗೆ ನೀಡಿದ್ದಾರೆ ಎಂದು ಇಲ್ಲಿಯ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಗಡಿ ದಾಟಿ ಬಂದ ಪಾಕ್ ಆಕ್ರಮಿತ ಕಾಶ್ಮೀರದ ಅಪ್ರಾಪ್ತ ವಶಕ್ಕೆ
ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಇದ್ದರೂ, ಒಪ್ಪಂದದಡಿಯಲ್ಲಿ ಉಭಯ ದೇಶಗಳು ವರ್ಷಕ್ಕೆ ಎರಡು ಬಾರಿ ಅಂದರೆ, ಜನವರಿ 1 ಮತ್ತು ಜುಲೈ 1 ರಂದು ಪರಸ್ಪರ ಬಂಧನದಲ್ಲಿದ್ದ ಕೈದಿಗಳ ಪಟ್ಟಿಗಳನ್ನು ವಿನಿಮಯ ಮಾಡಿಕೊಳ್ಳಬೇಕು. ಅದರಂತೆ ಇಂದು ಪರಸ್ಪರ ಕೈದಿಗಳ ಪಟ್ಟಿಗಳನ್ನು ವಿನಿಮಯ ಮಾಡಿಕೊಂಡಿವೆ.