ಶ್ರೀನಗರ: ಜಮ್ಮುಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಂಡ ಬಳಿಕ ಪಾಕಿಸ್ತಾನ ಭಾರತದ ಮೇಲೆ ಹರಿಹಾಯುತ್ತಿದ್ದು, ಗಡಿ ಪ್ರದೇಶದಲ್ಲಿ ರಕ್ತ ಹರಿಸಲು ಕುತಂತ್ರ ನಡೆಸುತ್ತಲೇ ಇದೆ. ಈ ಮಧ್ಯೆ ಗಡಿ ಪ್ರದೇಶದಲ್ಲಿ ಪಾಕ್ನ 20ಕ್ಕೂ ಹೆಚ್ಚು ಭಯೋತ್ಪಾದಕ ಶಿಬಿರಗಳು ಸಕ್ರಿಯವಾಗಿವೆ ಎಂಬ ಮಹತ್ವದ ಮಾಹಿತಿ ದೊರೆತಿದೆ.
ಪ್ರತಿಯೊಂದು ಶಿಬಿರದಲ್ಲೂ ಸುಮಾರು 50ಕ್ಕೂ ಹೆಚ್ಚು ಉಗ್ರರಿದ್ದು, ಫೆಬ್ರವರಿಯಲ್ಲಿ ನಡೆದಿರುವ ಪುಲ್ವಾಮಾದಂತಹ ದಾಳಿ ನಡೆಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಚಳಿಗಾಲ ಆರಂಭಗೊಳ್ಳುವ ಮುನ್ನವೇ ಜಮ್ಮುಕಾಶ್ಮೀರದೊಳಗೆ ಉಗ್ರರನ್ನು ಒಳನುಗ್ಗಿಸಿ, ಭಯೋತ್ಪಾದನಾ ಕೃತ್ಯ ನಡೆಸಲು ಮುಂದಾಗುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗಡಿ ಪ್ರದೇಶಗಳಲ್ಲಿ ಈಗಾಗಲೇ ಭಾರತೀಯ ಯೋಧರು ಹದ್ದಿನ ಕಣ್ಣಿಟ್ಟಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಜಮ್ಮುಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, ಕಣಿವೆ ರಾಜ್ಯದಲ್ಲಿ 200 ರಿಂದ 300 ಉಗ್ರರು ಕಾರ್ಯನಿರತರಾಗಿದ್ದಾರೆ ಎಂಬ ಮಾಹಿತಿ ನೀಡಿದ್ರು.
ಎಲ್ಇಟಿ, ಹಿಜ್ಬುಲ್ ಮುಜಾಹಿದ್ದಿನ್ ಹಾಗೂ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಗಳು ಭಾರತೀಯ ಯೋಧರ ಮೇಲೆ ದೊಡ್ಡ ಪ್ರಮಾಣದ ದಾಳಿ ನಡೆಸಲು ಮುಂದಾಗಿವೆ ಎಂದು ತಿಳಿದು ಬಂದಿದೆ.