ಶ್ರೀನಗರ(ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಶನಿವಾರ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ ಪುಂಡಾಟ ನಡೆಸಿದೆ.
ಕುಪ್ವಾರಾ ಜಿಲ್ಲೆಯ ಕೇರನ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ನಂತರ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದೆ. ಕೇರನ್ ವಲಯದಲ್ಲಿ ಎರಡೂ ಕಡೆಯವರ ನಡುವೆ ಭಾರೀ ಗುಂಡಿನ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಬಾರಾಮುಲ್ಲಾ ಜಿಲ್ಲೆಯ ಉರಿ ತಹಸಿಲ್‌ನ ಹಾಜಿ ಪೀರ್ ವಲಯದಲ್ಲೂ ಉಭಯ ದೇಶಗಳ ಸೈನಿಕರ ನಡುವೆ ಗುಂಡಿನ ದಾಳಿ ಮತ್ತು ಶೆಲ್ ದಾಳಿ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಭಾರತದ ಕಡೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.