ಇಸ್ಲಾಮಾಬಾದ್: ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಭಾರತೀಯ ಸೇನೆಯು ಕದನ ವಿರಾಮ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಪಾಕಿಸ್ತಾನ, ಈ ಬಗ್ಗೆ ತನ್ನ ಪ್ರತಿಭಟನೆಯನ್ನು ದಾಖಲಿಸಲು ಭಾರತೀಯ ಹೈಕಮಿಷನ್ನ ಹಿರಿಯ ರಾಜತಾಂತ್ರಿಕರಿಗೆ ಸಮನ್ಸ್ ನೀಡಿದೆ.
ಭಾರತೀಯ ಪಡೆಗಳು ಕಳೆದ ಶನಿವಾರ ರಾತ್ರಿ ಹಾಟ್ಸ್‌ಪ್ರಿಂಗ್ ಮತ್ತು ರಾಖ್ಚಿಕ್ರಿ ವಲಯಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಬಾಲಕಿ ಮೃತಪಟ್ಟಿದ್ದು, ನಾಲ್ವರು ನಾಗರಿಕರಿಗೆ ಗಂಭೀರ ಗಾಯಗಳಾಗಿವೆ ಎಂದು ಪಾಕ್ ವಿದೇಶಾಂಗ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ಆರೋಪಿಸಿದೆ.
ಭಾರತೀಯ ಪಡೆಗಳು ಎಲ್‌ಒಸಿ ಮತ್ತು ವರ್ಕಿಂಗ್ ಬೌಂಡರಿ (ಡಬ್ಲ್ಯುಬಿ) ಯ ಉದ್ದಕ್ಕೂ ಹೆವಿ ಕ್ಯಾಲಿಬರ್ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ನಿರಂತರ ದಾಳಿ ಮಾಡುತ್ತಿದೆ. ಈ ವರ್ಷ 2,225 ಸಲ ಕದನ ವಿರಾಮವನ್ನು ಉಲ್ಲಂಘಿಸಿದೆ. ಇದರಲ್ಲಿ 18 ಜನ ಮೃತಪಟ್ಟಿದ್ದು, 176 ಮಂದಿ ಗಾಯಗೊಂಡಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
2003 ರ ಕದನ ವಿರಾಮ ಒಪ್ಪಂದವನ್ನು ಗೌರವಿಸುವಂತೆ ತಿಳಿಸಲು, ಉದ್ದೇಶಪೂರ್ವಕ ಕದನ ವಿರಾಮ ಉಲ್ಲಂಘನೆ ಘಟನೆಗಳನ್ನು ತನಿಖೆ ಮಾಡಲು ಮತ್ತು ಎಲ್‌ಒಸಿ, ಡಬ್ಲ್ಯುಬಿಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ತಿಳಿಸಲು ಭಾರತೀಯರ ರಾಜತಾಂತ್ರಿಕರಿಗೆ ಬುಲಾವ್ ನೀಡಲಾಗಿದೆ ಎಂದು ಪಾಕ್ ವಿದೇಶಾಂಗ ಇಲಾಖೆ ತಿಳಿಸಿದೆ.