ಸಿಂಧ್ (ಪಾಕಿಸ್ತಾನ): ಹಿಂದೂ ಹುಡುಗಿಯೊಬ್ಬಳನ್ನು ವಿವಾಹ ಸಮಾರಂಭದಲ್ಲಿ ಅಪಹರಣ ಮಾಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ ಬಳಿಕ ಮುಸ್ಲಿಂ ವ್ಯಕ್ತಿಯೊಂದಿಗೆ ವಿವಾಹ ಮಾಡಿರುವ ಘಟನೆ ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯಲ್ಲಿರುವ ಹಲಾ ಎಂಬ ನಗರದಲ್ಲಿ ಬೆಳಕಿಗೆ ಬಂದಿದೆ.
ಸಿಂಧ್ ಪ್ರಾಂತ್ಯದ ಮಾಟಿಯಾರಿ ಜಿಲ್ಲೆಯಲ್ಲಿರುವ ಹಲಾ ಎಂಬ ನಗರದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಭಾರ್ತಿ ಬಾಯಿ ಎಂಬ ಹಿಂದೂ ಹುಡುಗಿಯನ್ನು ಜನರ ಗುಂಪೊಂದು ಅಪಹರಿಸಿದೆ. ನಂತರ ಅವರು ಶಾರುಖ್ ಗುಲ್ ಎಂಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ.
ಈ ಕುರಿತಂತೆ ಅಪಹರಣಕಾರರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೆಯೇ ವಧು ಒಬ್ಬರನ್ನ ಬಲವಂತವಾಗಿ ಕರೆದೊಯ್ಯಲು ಪೊಲೀಸರೇ ಪುರುಷರಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಪ್ರತಿವರ್ಷ ಸಿಂಧ್ ಪ್ರಾಂತ್ಯದಲ್ಲಿ ಸುಮಾರು 12 ರಿಂದ 28 ವರ್ಷದೊಳಗಿನ ಹಿಂದೂ ಹುಡುಗಿಯರನ್ನು ಅಪಹರಣ ಮಾಡಿ, ಅವರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ವಿವಾಹ ಮಾಡಲಾಗುತ್ತದೆ. 1 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ವರದಿ ಆಗುತ್ತಲೇ ಇರುತ್ತವೆ ಎಂದು ಯುಎಸ್ ಮೂಲದ ಸಿಂಧಿ ಫೌಂಡೇಶನ್ ಹೇಳಿದೆ.
ಪಾಕಿಸ್ತಾನದಲ್ಲಿ, ದೇಶದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಹೆಣ್ಣುಮಕ್ಕಳನ್ನು ಅದರಲ್ಲೂ ಮುಖ್ಯವಾಗಿ ಹಿಂದೂ, ಸಿಖ್ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ಪುರುಷರನ್ನು ಮದುವೆಯಾಗುವ ಅನೇಕ ಘಟನೆಗಳು ನಿತ್ಯ ನಡೆಯುತ್ತಲೇ ಇರುತ್ತವೆ.
ಕಳೆದ ಕೆಲವು ತಿಂಗಳಲ್ಲಿ, ದೇಶದ ಅಲ್ಪಸಂಖ್ಯಾತರ ಶೋಚನೀಯ ಸ್ಥಿತಿಯನ್ನು ಎತ್ತಿ ತೋರಿಸುವ ಹಲವಾರು ಘಟನೆಗಳು ಬೆಳಕಿಗೆ ಬಂದಿದ್ದು, ಕಳೆದ ವರ್ಷ ಆಗಸ್ಟ್ನಲ್ಲಿ, 19 ವರ್ಷದ ಜಗ್ಜಿತ್ ಕೌರ್ ಹಲವಾರು ದಿನಗಳವರೆಗೆ ಕಾಣೆಯಾಗಿದ್ದರು. ನಂತರ, ಅವಳು ಅಪಹರಣಕಾರರಿಂದ ಮುಸ್ಲಿಂ ಪುರುಷನನ್ನು ಬಲವಂತವಾಗಿ ಮದುವೆಯಾಗಿದ್ದಳು ಎಂದು ತಿಳಿದು ಬಂದಿದೆ.