ಇಸ್ಲಾಮಾಬಾದ್: ಕಾಶ್ಮೀರದ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಮತ್ತು ಅಲ್ಲಿ ವೈದ್ಯಕೀಯ ಹಾಗೂ ಇತರ ಅಗತ್ಯ ಸಾಮಗ್ರಿಗಳು ಯಾವುದೇ ಅಡೆತಡೆಯಿಲ್ಲದೇ ಸಿಗುವಂತೆ ಅನುಮತಿ ಕೋರಿ ಪಾಕಿಸ್ತಾನವು ಅಂತಾರಾಷ್ಟ್ರೀಯ ಸಮುದಾಯವನ್ನು ಕೇಳಿದೆ.
ಸಾವಿರಾರು ಕಾಶ್ಮೀರಿ ಯುವಕರು, ನಾಗರಿಕರು, ಪತ್ರಕರ್ತರು ಮತ್ತು ಕಾಶ್ಮೀರಿ ಮುಖಂಡರು ಜೈಲಿನಲ್ಲಿದ್ದಾರೆ ಎಂದು ವಿದೇಶಾಂಗ ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವೈದ್ಯಕೀಯ ಮತ್ತು ಇತರ ಅಗತ್ಯ ಸಾಮಗ್ರಿಗಳು ಯಾವುದೇ ಅಡೆತಡೆಯಿಲ್ಲದ ದೊರಕುವಂತೆ ಅನುಮತಿಸಲು ಭಾರತಕ್ಕೆ ತುರ್ತಾಗಿ ಬೇಡಿಕೆಯಿಡಲು ಪಾಕಿಸ್ತಾನ ಅಂತರಾಷ್ಟ್ರೀಯ ಸಮುದಾಯವನ್ನು ಕೇಳಿದೆ.
"ಎಲ್ಲಾ ರಾಜಕೀಯ ಕೈದಿಗಳನ್ನು ಭಾರತೀಯ ಜೈಲುಗಳಿಂದ ಬಿಡುಗಡೆ ಮಾಡಲು ತಕ್ಷಣ ಅನುಮತಿ ನೀಡುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಬೇಕು" ಎಂದು ಪಾಕ್ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದಾಗಿನಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು ಇದು ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕ ಸಂಬಂಧದ ಮೇಲೂ ಪರಿಣಾಮ ಬಿರಿದೆ ಎಂದು ಪಾಕ್ ಹೇಳಿದೆ.
370ನೇ ವಿಧಿಯನ್ನು ರದ್ದುಪಡಿಸಿರುವುದು ಭಾರತದ ಆಂತರಿಕ ವಿಷಯ ಎಂದು ಭಾರತವು ಅಂತರರಾಷ್ಟ್ರೀಯ ಸಮುದಾಯಕ್ಕೆ ಸ್ಪಷ್ಟವಾಗಿ ತಿಳಿಸಿದೆ.
ವಾಸ್ತವವನ್ನು ಒಪ್ಪಿಕೊಂಡು ಭಾರತ ವಿರೋಧಿ ಪ್ರಚಾರವನ್ನು ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಭಾರತ ಸಲಹೆ ನೀಡಿದೆ.