ಶ್ರೀನಗರ: ಸತತವಾಗಿ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಜಮ್ಮು ಮತ್ತು ಶ್ರೀನಗರವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸತತ ಮೂರು ದಿನಗಳಿಂದ ಬಂದ್ ಆಗಿದೆ.
ಈ ಭಾಗದಲ್ಲಿ ಆಗಾಗ ಭೂಕುಸಿತಗಳು ಸಂಭವಿಸುತ್ತಲೇ ಇದ್ದು, ರಸ್ತೆ ಬಂದ್ ಆಗಿ ಸುಮಾರು 5000ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲೇ ಸಿಕ್ಕಿಹಾಕಿಕೊಂಡಿವೆ.
ರಂಬಾನ್ ಜಿಲ್ಲೆಯ ದಿಗ್ದಾಲ್ ಮತ್ತು ಪಂಥಿಯಾಲ್ ಭಾಗದ ಹೆದ್ದಾರಿಯಲ್ಲಿ ಇಂದು ನಾಲ್ಕು ಭುಕುಸಿತಗಳು ಸಂಭವಿಸಿದೆ. ಹೀಗಾಗಿ ಇಂದಿಗೆ ಸತತ ಮೂರನೇ ದಿನ ರಸ್ತೆ ಸಂಚಾರ ಬಂದ್ ಆಗಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸೋಮವಾರ ಸುರಿದ ಭಾರಿ ಮಳೆಯಿಂದ ಮೊಂಪಸ್ಸಿ, ದಿಗ್ದಾಲ್ ಮತ್ತು ಪಂಥಿಯಲ್ ಪ್ರದೇಶಗಳಲ್ಲಿ ಕಲ್ಲುಗಳು ರಸ್ತೆಗುರುಳಿದ್ದು, ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಜಮ್ಮುವಿನ ನಾಗ್ರೋಟಾದಿಂದ ಕಾಶ್ಮೀರಕ್ಕೆ ಯಾವುದೇ ಹೊಸ ಸಂಚಾರಕ್ಕೆ ಅನುಮತಿ ನೀಡಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಹೆದ್ದಾರಿಗೆ ದಿಗ್ಬಂಧನ ಹಾಕಿದ ಪರಿಣಾಮವಾಗಿ, ಕತುವಾ ಜಿಲ್ಲೆಯ ಲಖನ್‌ಪುರದಿಂದ ರಾಂಬನ್ ಜಿಲ್ಲೆಯ ಬನಿಹಾಲ್ ಮತ್ತು ಕಾಶ್ಮೀರ ಭಾಗದಲ್ಲೂ 5000 ಕ್ಕೂ ಹೆಚ್ಚು ವಾಹನಗಳು ವಿವಿಧ ಸ್ಥಳಗಳಲ್ಲಿ ಸಿಲುಕಿಕೊಂಡಿವೆ.
ಕಳೆದ ಕೆಲದಿನಗಳಿಂದ ಜಮ್ಮು - ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.