ಇಂಫಾಲ್ (ಮಣಿಪುರ): ತೌಬಲ್ ಜಿಲ್ಲೆಯ ಮೌಜಿಂಗ್ ಪ್ರದೇಶದ ಮನೆಯೊಂದರ ಮೇಲೆ ದಾಳಿ ಮಾಡಿ ಸುಮಾರು 435 ಕೆ.ಜಿಗೂ ಹೆಚ್ಚು ಬ್ರೌನ್ ಶುಗರ್ ವಶಪಡಿಸಿಕೊಳ್ಳಲಾಗಿದೆ ಎಂದು ಮಣಿಪುರ ಪೊಲೀಸರು ಮಾಹಿತಿ ನೀಡಿದ್ದಾರೆ.
ಸುಮಾರು 16 ಪೊಟ್ಟಣಗಳಷ್ಟು ಬ್ರೌನ್ ಶುಗರ್ ಜೊತೆಗೆ ಹಲವು ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತೌಬಲ್ನ ಪೊಲೀಸ್ ವರಿಷ್ಠಾಧಿಕಾರಿ ಸರಂಗ್ಥೆಮ್ ಇಬೊಂಚಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
435.94 ಕೆ.ಜಿ ಬ್ರೌನ್ ಶುಗರ್ ಜೊತೆಗೆ 438 ಲೀಟರ್ಗಳಷ್ಟು ಮಾರ್ಫಿನೇಟೆಡ್ ಲಿಕ್ವಿಡ್, 705 ಗ್ರಾಮ್ ಸುಣ್ಣ ಹಾಗೂ ಒಂದು ಲೀಟರ್ ಅಮೋನಿಯಂ ಕ್ಲೋರೈಡ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಆರೋಪಿಗಳು ಬಳಸುತ್ತಿದ್ದ ಮೂರು ಎಲ್ಪಿಜಿ ಸಿಲಿಂಡರ್ಗಳು, ಒಂದು ಬೈಕ್, ಒಂದು ಆಟೋ ರಿಕ್ಷಾವನ್ನು ಕಾರ್ಯಾಚರಣೆ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ವಶಪಡಿಸಿಕೊಂಡ ಸಾಮಗ್ರಿಗಳ ಮಾರುಕಟ್ಟೆ ಮೌಲ್ಯವನ್ನು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದ್ದಾರೆ.
ಬ್ರೌನ್ ಶುಗರ್ ತಯಾರಿಸುತ್ತಿದ್ದ ಖಯಾಮುದ್ದೀನ್ ಹಾಗೂ ಆತನ ಪತ್ನಿ ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಸೆರೆಹಿಡಿಯಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.