ಆಡಿಸ್ ಅಬಾಬಾ(ಇಥಿಯೋಪಿಯಾ): ಪಶ್ಚಿಮ ಇಥಿಯೋಪಿಯಾದಲ್ಲಿ ವಾರದ ಆರಂಭದಲ್ಲಿ ನಡೆದ ಶಸ್ತ್ರಾಸ್ತ್ರ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಫೆಡರಲ್ ಹಕ್ಕುಗಳ ಗುಂಪು ಖಚಿತಪಡಿಸಿದೆ.
ಮಂಗಳವಾರ ರಾತ್ರಿ ಪಶ್ಚಿಮ ಪ್ರಾದೇಶಿಕ ರಾಜ್ಯವಾದ ಬೆನಿ ಶಾಂಗುಲ್ - ಗುಮುಜ್ನ ಮೆಟೆಕೆಲ್ ವಲಯದ ಬೆಕೊಜಿ ಗ್ರಾಮದಲ್ಲಿ ರಕ್ತಪಾತ ಸಂಭವಿಸಿದೆ. ರಾತ್ರಿ ಬೆಚ್ಚಗಿನ ನಿದ್ದೆಯಲ್ಲಿದ್ದ ನಿವಾಸಿಗಳ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳು ಬೆಂಕಿ ಹಚ್ಚಿ, ಗುಂಡು ಹಾರಿಸಿದ್ದಾರೆ ಎಂದು ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗ (ಇಹೆಚ್ಆರ್ಸಿ) ತಡರಾತ್ರಿ ಖಾಸಗಿ ಸುದ್ದಿ ಸಂಸ್ಥೆಗೆ ಕಳುಹಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಘಟನೆಯು ಈ ಪ್ರದೇಶದಲ್ಲಿ ನಿರಂತರವಾಗಿ ಹದಗೆಡುತ್ತಿರುವ ಮಾನವ ಹಕ್ಕುಗಳ ರಕ್ಷಣೆಯನ್ನು ಬಹಿರಂಗಪಡಿಸಿದೆ. ಇತ್ತೀಚೆಗೆ ಗಮನಿಸುವುದಾದರೆ ದಾಳಿಗಳ ಪ್ರಮಾಣ ತೀವ್ರಗೊಂಡಿವೆ, ಎಂದು ಇಹೆಚ್ಆರ್ಸಿ ಎಚ್ಚರಿಸಿದೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ತನಿಖೆಗೆ ಯಾವುದೇ ಪೊಲೀಸ್ ಅಥವಾ ಯಾವುದೇ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿಲ್ಲ. ಆಯೋಗವು ಘಟನೆಯಲ್ಲಿ ನೊಂದವರು ಮತ್ತು ಸಂಬಂಧಪಟ್ಟ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಘಟನೆಯ ತನಿಖೆ ನಡೆಸುತ್ತಿದೆ.