ಪೂರ್ಬಾ ಮೆದಿನಿಪುರ: ಬಂಗಾಳಿ ಭಕ್ಷ್ಯಗಳು ಯಾರ ಬಾಯಲ್ಲಿ ನೀರೂರಿಸಲ್ಲ ಹೇಳಿ.. ಬಂಗಾಳಿ ಎಂದ ತಕ್ಷಣ ಮೊದಲಿಗೆ ನೆನಪಾಗೋದು ರುಚಿಕರ, ಬಗೆ ಬಗೆಯ ಖಾದ್ಯಗಳು. ಇಂದು ನಾವು ನಿಮಗೆ ಅಂತಹುದ್ದೇ ಒಂದು ವಿಭಿನ್ನ ಖಾದ್ಯದ ಬಗ್ಗೆ ಹೇಳ ಹೊರಟಿದ್ದೇವೆ. ಕುಂಬಳಕಾಯಿ ಬಳಸಿ ವಿವಿಧ ರೂಪಗಳಲ್ಲಿ ಈ ಖಾದ್ಯ ತಯಾರಿಸಲಾಗುತ್ತದೆ. ಶಂಕುವಿನಾಕಾರದ ಒಂದು ಒತ್ತಳದಂತಹ ಆಕೃತಿಗೆ ಕುಂಬಳಕಾಯಿಯಿಂದ ತಯಾರಿಸಿದ ಹಿಟ್ಟು ಹಾಕಿ ವಿವಿಧ ಆಕಾರಗಳನ್ನು ನೀಡಲಾಗುತ್ತದೆ. ಇದನ್ನು ಗೊಯ್ನಾ ಬೋರಿ ಎಂದು ಕರೆಯುತ್ತಾರೆ.
ಚಿಟ್ಟೆಗಳು, ಬಾತುಕೋಳಿ, ಗಿಳಿ, ನವಿಲು, ಕಿವಿಯೋಲೆ, ಬಳೆಗಳು, ಕೈಗಡಿಯಾರ ಸೇರಿದಂತೆ ಬಗೆ ಬಗೆಯ ಆಕಾರಗಳನ್ನು ನೀಡುತ್ತಾರೆ. ಈ ಡಿಸೈನರ್ ಕುಂಬಳಕಾಯಿಗಳು ದಶಕಗಳಿಂದ ಬಂಗಾಳಿ ಪಾಕದಲ್ಲಿ ಸ್ಥಾನ ಪಡೆದಿವೆ. ಪೂರ್ಬಾ ಮೆದಿನಿಪುರ ಜಿಲ್ಲೆಯ ತಮ್ಲುಕ್, ಮಹಿಷಾದಲ್, ನಂದಕುಮಾರ್ ಮತ್ತು ಮೊಯ್ನಾ ಗ್ರಾಮೀಣ ಮಹಿಳೆಯರು ಪ್ರಮುಖವಾಗಿ ಈ ಗೊಯ್ನಾ ಬೋರಿಯನ್ನು ತಯಾರಿಸುತ್ತಾರೆ.
ಗೊಯ್ನಾ ಬೋರಿ ತಯಾರಿಕೆಯು ಬಂಗಾಳಿ ತಿಂಗಳ ಕಾರ್ತಿಕ ಮಾಸದಲ್ಲಿ ಪ್ರಾರಂಭವಾಗುತ್ತದೆ. ಒಣ ಗಸಗಸೆ ಬೀಜಗಳ ಪದರದ ಮೇಲೆ ಇದಕ್ಕೆ ರುಪ ನೀಡಲಾಗುತ್ತದೆ. ಆರಂಭದಲ್ಲಿ, ಸ್ಥಳೀಯ ಪಾದ್ರಿಯನ್ನು ಕರೆಸಿ ಒಂದು ಸಣ್ಣ ಸಮಾರಂಭವನ್ನು ನಡೆಸಲಾಗುತ್ತದೆ. ಇದರಲ್ಲಿ ಎರಡು ಕುಂಬಳಕಾಯಿಗಳು ಸಾಂಕೇತಿಕವಾಗಿ ಪರಸ್ಪರ ಮದುವೆಯಾಗುತ್ತವೆ.
ಜಿಲ್ಲೆಯ ಸಂಪ್ರದಾಯ ರಕ್ಷಿಸಲು ಪುರ್ಬಾ ಮೆದಿನಿಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಪಾರ್ಥಾ ಘೋಷ್ ಉಪಕ್ರಮಗಳನ್ನು ಕೈಗೊಂಡಿದ್ದಾರೆ. ಜಿಲ್ಲೆಯ ವ್ಯಾಪಾರವನ್ನು ಹೆಚ್ಚಿಸಲು ಅವರು ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆಯೊಂದಿಗೆ ಸೇರಿ ಕ್ರಮ ಕೈಗೊಂಡಿದ್ದಾರೆ. ಆಡಳಿತವು ಬೋರಿಯ ವ್ಯಾಪಾರ ವೃದ್ಧಿಗೆ ಕ್ರಮ ಕೈಗೊಂಡಿದ್ದು, ಇದರ ಘಮ ಪಶ್ಚಿಮ ಬಂಗಾಳ ಮಾತ್ರವಲ್ಲದೇ ಇತರಡೆಯು ಹರಡಲಿದೆ