ನವದೆಹಲಿ: ಇನ್ಮುಂದೆ ಭಾರತದ ಕಲ್ಲಿದ್ದಲು ಉದ್ಯಮಗಳಲ್ಲಿ ಸ್ಥಳೀಯ ಹಾಗೂ ವಿದೇಶಿ ಪಾಲುದಾರಿಕೆ ಸಾಧ್ಯತೆ ಪೂರ್ಣ ಪ್ರಮಾಣದಲ್ಲಿ ಇರಲಿದೆ. ಈ ಕುರಿತಂತೆ ಇದ್ದ ಕೆಲವು ಷರತ್ತುಗಳನ್ನು ಕೇಂದ್ರ ಬಿಜೆಪಿ ಸರ್ಕಾರ ತನ್ನ ಕ್ಯಾಬಿನೆಟ್ ಸಭೆಯಲ್ಲಿ ಸುಗ್ರಿವಾಜ್ಞೆಯನ್ನು ಒಪ್ಪಿಕೊಳ್ಳುವುದರ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಈ ಮೂಲಕ ಜಾಗತಿಕ ಕಂಪನಿಗಳಿಗೆ ಅವಕಾಶ ನೀಡಲಾಗಿದ್ದು ಸ್ಥಳೀಯ ಕಂಪನಿಗಳಂತೆ ವಿದೇಶಿ ಕಂಪನಿಗಳೂ ಕೂಡಾ ಪೂರ್ಣ ಪ್ರಮಾಣದಲ್ಲಿ ಹೂಡಬಹುದಾಗಿದೆ. ಈ ನಿರ್ಧಾರದಿಂದ ಕೋಲ್ ಇಂಡಿಯಾಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಕಲ್ಲಿದ್ದಲು ಹಾಗೂ ಗಣಿಗಾರಿಕೆ ಸಚಿವ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ಈ ಮಹತ್ತರ ಬದಲಾವಣೆಗೆ ಕೇಂದ್ರ ಕ್ಯಾಬಿನೆಟ್ ಖನಿಜಗಳ ಕಾನೂನು ತಿದ್ದುಪಡಿ ಸುಗ್ರಿವಾಜ್ಞೆಯನ್ನು ಅಂಗೀಕರಿಸಿದೆ. ಈ 2015 ಮೂಲಕ ಕಲ್ಲಿದ್ದಲು ಗಣಿಗಾರಿಕೆಯ ವಿಶೇಷ ನಿಬಂಧನೆಗಳ ಕಾಯ್ದೆಯನ್ನು ಹಾಗೂ ಗಣಿಗಳು ಹಾಗೂ 1957ರ ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ಕಾಯ್ದೆಗಳಿಗೆ ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯು ಕಲ್ಲಿದ್ದಲು ಗಣಿಗಾರಿಕೆ ಮೇಲೆ ಮಾತ್ರವಲ್ಲದೇ ಇದೇ ವರ್ಷದ ಮಾರ್ಚ್ನಲ್ಲಿ ನಡೆಯಲಿರುವ ಕಬ್ಬಿಣದ ಅದಿರಿನ ಹರಾಜು ಪ್ರಕ್ರಿಯೆಯಲ್ಲೂ ಕೂಡಾ ಪರಿಣಾಮ ಬೀರಲಿದೆ.
ಈ ಸುಗ್ರೀವಾಜ್ಞೆಯ ಕಾರಣದಿಂದ ಮುಂದಿನ ಬಜೆಟ್ ಹಾಗೂ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆಯ ಮೇಲೂ ಕೂಡಾ ಪ್ರಭಾವಿಸಲಿದೆ. ಇದೇ ತಿಂಗಳಲ್ಲಿ ನಡೆಯಲಿರುವ ಕಲ್ಲಿದ್ದಲು ಗಣಿಗಳ ಹರಾಜಿಗೆ ಹೊಸ ಹುರುಪು ನೀಡಲಿದ್ದು ಹೂಡಿಕೆದಾರರಿಗೆ ಉತ್ಸಾಹ ತುಂಬಲಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ '' ಕಲ್ಲಿದ್ದಲು ಕ್ಷೇತ್ರದಲ್ಲಿ ಹೊಸ ರೀತಿಯ ಬೆಳವಣಿಗೆಯಾಗೋದಕ್ಕೆ ಈ ತಿದ್ದುಪಡಿಯಿಂದ ಸಾಧ್ಯವಾಗುತ್ತದೆ'' ಎಂದಿದ್ದಾರೆ. ಇದರ ಜೊತೆಗೆ ''ದೇಶ ಹಿಂದಿನ ವರ್ಷ 1.75 ಲಕ್ಷ ಕೋಟಿ ಮೌಲ್ಯದ 235 ಕೋಟಿ ಟನ್ಗಳಷ್ಟು ಕಲ್ಲಿದ್ದಲನ್ನು ಆಮದು ಮಾಡಿಕೊಂಡಿತ್ತು. 2023-24ರ ವೇಳೆಗೆ ಒಂದು ಬಿಲಿಯನ್ ಟನ್ಗಳಷ್ಟು ಕಲ್ಲಿದ್ದಲು ಉತ್ಪಾದಿಸುವ ಗುರಿಯನ್ನು ಕೋಲ್ ಇಂಡಿಯಾ ಹೊಂದಿದೆ'' ಎಂದು ಈ ವೇಳೆ ಸ್ಪಷ್ಟಪಡಿಸಿದ್ರು.
ಬೇರೆ ಬೇರೆ ದೇಶಗಳ ಪ್ರಸಿದ್ಧ ಕಂಪನಿಗಳು ಭಾರತೀಯ ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಪಿಬಾಡಿ, ಬಿಹೆಚ್ಪಿ ಬಿಲ್ಲಿಟನ್, ರಿಯೋ ಟಿಂಟೋ ಉದ್ಯಮಗಳು ಕಲ್ಲಿದ್ದಲು ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಬಯಸಬಹುದೆಂದು ಊಹಿಸಲಾಗಿದೆ. ಜೊತೆಗೆ ದೇಶೀಯ ಕೆಲವೊಂದು ದೇಶಿಯ ಕಂಪನಿಗಳ ಮೇಲೆಯೂ ಕೂಡಾ ನಿರೀಕ್ಷೆ ಇಡಲಾಗಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ '' ಈ ತಿದ್ದುಪಡಿ ಅನಿವಾರ್ಯವಾಗಿದ್ದು ಹೂಡಿಕೆದಾರರಲ್ಲಿ ಭರವಸೆ ಹೆಚ್ಚಿಸುತ್ತದೆ. 2020ರ ಮಾರ್ಚ್ನಲ್ಲಿ 46 ಕಬ್ಬಿಣದ ಅದಿರು ಗಣಿಗಾರಿಕೆಗಳಲ್ಲಿ ಒಪ್ಪಂದ ಮುಗಿದು ಹೊಸ ಹರಾಜು ಪ್ರಕ್ರಿಯೆ ಶುರುವಾಗುವ ಕಾರಣದಿಂದ ಈ ತಿದ್ದುಪಡಿ ಹೆಚ್ಚು ಸೂಕ್ತ'' ಎಂದಿದ್ದು ಈ ನಿರ್ಧಾರಗಳು ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರಭಾವ ಬೀರಲಿವೆ ಎಂಬುದು ಅಸ್ಪಷ್ಟವಾಗಿದೆ.