ಪಣಜಿ: ಕೊರೊನಾ ವೈರಸ್ ಭೀತಿ ಹೊರತಾಗಿಯೂ ಜಿಲ್ಲಾ ಪಂಚಾಯತ್ ಚುನಾವಣೆಗಾಗಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿರುವುದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.
ಮಾರ್ಚ್ 22 ರಂದು 50 ಜಿಲ್ಲಾ ಪಂಚಾಯತ್ ಚುನಾವಣೆ ನಡೆಯಲಿದೆ. ಕೊರೊನಾ ವೈರಸ್ ಎಲ್ಲೆಡೆ ವ್ಯಾಪಿಸುತ್ತಿರುವುದರಿಂದ ಮುಂಬರುವ ಚುನಾವಣೆಯನ್ನು ಮುಂದೂಡಬೇಕೆಂದು ವಿರೋಧ ಪಕ್ಷಗಳು ಆಗ್ರಹಿಸಿವೆ.
ಆಂಧ್ರಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಎರಡು ತಿಂಗಳ ಕಾಲ ಮುಂದೂಡಲಾಗಿದೆ. ಇದೇ ಮಾರ್ಗವನ್ನು ಗೋವಾ ಸರ್ಕಾರ ಅನುಸರಿಸಬೇಕು. ಹಾಗೂ ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟುವತ್ತ ಸರ್ಕಾರ ಗಮನಹರಿಸಬೇಕು ಎಂದು ಗೋವಾ ಪಾರ್ವರ್ಡ್ ಪಾರ್ಟಿ (ಜಿಎಫ್ಪಿ)ಅಧ್ಯಕ್ಷ ವಿಜಯ್ ಸರ್ದೇಸಾಯಿ ಆಗ್ರಹಿಸಿದ್ದಾರೆ.
ಗೋವಾದಲ್ಲಿ 1897ರಲ್ಲಿ ಕಠಿಣ ಸಾಂಕ್ರಾಮಿಕ ರೋಗಗಳ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಹಾಗಿದ್ದರೂ ಸಿಎಂ ಇದೆಲ್ಲವನ್ನು ಧಿಕ್ಕರಿಸಿ ಚುನಾವಣೆಯತ್ತ ಮಾತ್ರ ಗಮನಹರಿಸುತ್ತಿದ್ದಾರೆ. ಸಭೆಗಳನ್ನು ನಡೆಸಲು ಸಿಎಂ ಇತರ ಪಕ್ಷಗಳಿಗೆ ಅನುಮತಿ ನೀಡುತ್ತಿಲ್ಲ. ಆದ್ರೆ, ಬಿಜೆಪಿ ಮಾತ್ರ ಸಭೆಗಳನ್ನ ಮುಂದುವರೆಸಿದೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಹೇಳಿದ್ದಾರೆ.
ಬಿಜೆಪಿ ಗೋವಾ ಅಧ್ಯಕ್ಷ ಸದಾನಂದ್ ತನವಾಡೆ ಮಾತನಾಡಿ, ಬಿಜೆಪಿ ಸಣ್ಣ ಸಣ್ಣ ಸಭೆಗಳನ್ನು ಮಾತ್ರ ನಡೆಸಿದೆ. ಸಭೆಗಳಲ್ಲಿ ಭಾಗವಹಿಸಿದ ಎಲ್ಲರೂ ಆಯಾ ಗ್ರಾಮದ ಪಕ್ಷದ ಕಾರ್ಯಕರ್ತರು ಮಾತ್ರ ಎಂದು ಪಕ್ಷ ಹಾಗೂ ಸಿಎಂ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.