ವಿಯೆನ್ನಾ: ಸಾಂಕ್ರಾಮಿಕ ರೋಗ ಕೊರೊನಾ ವೈರಸ್ ಕಾಟಕ್ಕೆ 2020ರ ಆರಂಭದಿಂದ ಈವರೆಗೂ ಮೂರನೇ ಎರಡರಷ್ಟು ತೈಲ ಬೆಲೆ ಕುಸಿದಿದೆ. ಇದರಿಂದ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಅತಿದೊಡ್ಡ ನಷ್ಟ ಉಂಟಾಗಿದೆ. ಅಷ್ಟೇ ಅಲ್ಲ ವಿಶ್ವದ ಆರ್ಥಿಕತೆಯೂ ತಲ್ಲಣಗೊಂಡಿದೆ.
ಹೀಗಾಗಿ ನಷ್ಟದ ಹಾದಿಯಲ್ಲಿ ಸಾಗುತ್ತಿರುವ ತೈಲ ಮಾರುಕಟ್ಟೆಯನ್ನು ಹಳಿಗೆ ತರಲು ಸೌದಿ ಅರೇಬಿಯಾ ನೇತೃತ್ವದಲ್ಲಿ ಒಪೆಕ್ (ತೈಲ ರಫ್ತು ರಾಷ್ಟ್ರಗಳ ಒಕ್ಕೂಟ) ಸಮೂಹ ತೈಲ ಉತ್ಪಾದಕರು ಮತ್ತು ಅವರ ಮಿತ್ರರಾಷ್ಟ್ರಗಳು ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ತೈಲ ಬೆಲೆ ಏರಿಸುವ ಕುರಿತು ಚರ್ಚೆ ನಡೆಸಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಜಗತ್ತಿನಲ್ಲಿ ಅತಿ ಹೆಚ್ಚು ತೈಲ ರಫ್ತು ಮಾಡುವ ಸೌದಿ ಅರೇಬಿಯಾ ತೈಲ ಮಾರುಕಟ್ಟೆಯನ್ನು ಸ್ಥಿರಗೊಳಿಸಲು ಒಪೆಕ್ ಮತ್ತು ಅದರ ಪಾಲುದಾರರಿಗೆ ಈ ಕುರಿತು ಮಾಹಿತಿ ನೀಡಿದೆ. ತೈಲ ಮಾರುಕಟ್ಟೆಯನ್ನು ಸಹಜ ಸ್ಥಿತಿಗೆ ತರಲು ಶೇ.10 ರಷ್ಟು ಬೆಲೆ ಏರಿಸುವ ತೀರ್ಮಾನ ಹೊಂದಲಾಗಿದೆ.
ತುರ್ತು ಸಭೆ ನಡೆಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಸೌದಿ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ದೂರವಾಣಿ ಕರೆ ಮೂಲಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಭೆಗೆ ಪಾಲುದಾರ ರಾಷ್ಟ್ರಗಳು ಹೊರತುಪಡಿಸಿ, ಬೇರೆ ರಾಷ್ಟ್ರಗಳಿಗೂ ಆಹ್ವಾನ ನೀಡಲಾಗಿದೆ. ಆದರೆ, ಯಾವ ದೇಶಗಳು ಪಾಲ್ಗೊಳ್ಳಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ದಿನಕ್ಕೆ 10 ಮಿಲಿಯನ್ ಬ್ಯಾರೆಲ್ ಉತ್ಪಾದನೆ ಕಡಿಮೆ ಮಾಡುವ ಕುರಿತು ಸಭೆಯಲ್ಲಿ ರಿಯಾ ನೋವೆಸ್ಟಿ ಏಜೆನ್ಸಿಯು ಚರ್ಚಿಸಲಿದೆ ಎಂದು ರಷ್ಯಾದ ಮೂಲವೊಂದು ತಿಳಿಸಿದೆ. ಕಳೆದ ತಿಂಗಳು ನಡೆದ ಒಪೆಕ್ ಸಭೆಯಲ್ಲಿ ದಿನಕ್ಕೆ ಹೆಚ್ಚುವರಿಯಾಗಿ ಉತ್ಪಾದಿಸುವ 1.5 ಮಿಲಿಯನ್ ಬ್ಯಾರೆಲ್ ಕಡಿತಗೊಳಿಸುವ ಕುರಿತು ರಷ್ಯಾ ನಿರಾಕರಿಸಿತ್ತು. ಇದು ಸೌದಿ ಅರೇಬಿಯಾ ಕೋಪಕ್ಕೆ ಕಾರಣವಾಗಿತ್ತು. ಈಗ ರಷ್ಯಾವೇ ತೈಲ ಉತ್ಪಾದನೆ ಕಡಿತ ಮಾಡುವ ಕುರಿತು ಚಿಂತನೆ ನಡೆಸುತ್ತಿದೆ.