ನಮಕ್ಕಲ್ (ತಮಿಳುನಾಡು): ರಾಜ್ಯದಲ್ಲಿ ಉದ್ದೇಶಿತ 11 ವೈದ್ಯಕೀಯ ಕಾಲೇಜುಗಳು ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದೆ ಎಂಬ ಪ್ರತಿಪಕ್ಷಗಳ ಆರೋಪ ಸುಳ್ಳು, ಅಖಿಲ ಭಾರತ ಕೋಟಾದಡಿ ಶೇ 15 ಮಾತ್ರ ಅವಕಾಶ ನೀಡಲಾಗಿದೆ ಎಂದು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಹೊಸ ವೈದ್ಯಕೀಯ ಕಾಲೇಜುಗಳು ಬೇರೆ ರಾಜ್ಯಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಿದೆ ಎಂದು ಪ್ರತಿಪಕ್ಷಗಳು ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿವೆ. ಕೇವಲ ಶೇ.15ರಷ್ಟು ಸೀಟ್ಗಳು ಮಾತ್ರ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಉಳಿದ ಶೇ 85 ರಷ್ಟು ತಮಿಳುನಾಡಿನ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ. ಅಲ್ಲದೇ ಅಖಿಲ ಭಾರತ ಕೋಟಾದಡಿ ತಮಿಳುನಾಡಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಿದೆ ಎಂದು ಹೇಳಿದರು.
ದೇಶದ ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ತಮಿಳುನಾಡಿನದ್ದು ದೊಡ್ಡ ಪಾಲಿದೆ. 2011ರವರೆಗೆ ರಾಜ್ಯದಲ್ಲಿ ಕೇವಲ 1,945 ವೈದ್ಯಕೀಯ ಸೀಟುಗಳು ಮಾತ್ರ ಇದ್ದವು. ದಿವಂಗತ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಮುಖ್ಯಸ್ಥೆ ಜೆ.ಜಯಲಲಿತಾ ಅವರು ಹೆಚ್ಚುವರಿ 885 ವೈದ್ಯಕೀಯ ಸೀಟ್ಗಳನ್ನು ಸೃಷ್ಟಿಸಿದ್ದರು. 2016 ರಲ್ಲಿ ಅವರ ನಿಧನದ ಬಳಿಕ ಸರ್ಕಾರ ಅವರು ಹಾಕಿ ಕೊಟ್ಟ ಮಾರ್ಗವನ್ನು ಅನುಸರಿಸಿ ಕಳೆದ ವರ್ಷ ಹೆಚ್ಚುವರಿ 350 ವೈದ್ಯಕೀಯ ಸೀಟುಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಹೊಸದಾಗಿ ಆರಂಭವಾಗುವ 11 ವೈದ್ಯಕೀಯ ಕಾಲೇಜುಗಳಿಂದ, ಇನ್ನೂ 1,650 ಸೀಟ್ಗಳನ್ನು ಸೃಷ್ಟಿಸಲಾಗುವುದು ಎಂದು ತಿಳಿಸಿದರು.