ಬಿಎ, ಬಿಕಾಂ ಹಾಗೂ ಇನ್ನೂ ಕೆಲ ವಿಷಯಗಳಲ್ಲಿ ದೂರಶಿಕ್ಷಣದ ಮೂಲಕ ಪದವಿ ಪಡೆಯುವುದು ಹಳೆಯ ಮಾತಾಯಿತು. ದೇಶದ ನೂರಾರು ವಿವಿಗಳು ಈ ವಿಷಯಗಳಲ್ಲಿ ಆನ್ಲೈನ್ ಪದವಿ ಕೋರ್ಸ್ ಆರಂಭಿಸಿವೆ. ಆದರೆ ವಿಜ್ಞಾನ ಮೂಲ ವಿಷಯವಾದ ಬಿಎಸ್ಸಿ ಪದವಿಯನ್ನು ಆನ್ಲೈನ್ ಮೂಲಕ ಪಡೆಯುವುದು ಇಷ್ಟು ದಿನ ಸಾಧ್ಯವಿರಲಿಲ್ಲ. ಆದರೆ ಈಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಈ ಅವಕಾಶವನ್ನೂ ನೀಡಿದೆ. ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ ಪೋಖ್ರಿಯಾಲ್ ಅವರು ನಿಶಾಂಕ್ ಹೆಸರಿನ ಆನ್ಲೈನ್ ಬಿಎಸ್ಸಿ ಪದವಿ ಕೋರ್ಸ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿದ್ದಾರೆ.
ಮದ್ರಾಸ್ ಐಐಟಿಯು ಆನ್ಲೈನ್ ಮೂಲಕ ಪ್ರೊಗ್ರಾಮಿಂಗ್ ಮತ್ತು ಡೇಟಾ ಸೈನ್ಸ್ ಬಿಎಸ್ಸಿ ಪದವಿ ಕೋರ್ಸ್ ಆರಂಭಿಸಿದ್ದು, ಹತ್ತನೇ ತರಗತಿಯಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಅಧ್ಯಯನ ನಡೆಸಿ 12ನೇ ತರಗತಿ ಪಾಸಾದವರು ಹಾಗೂ ಪ್ರಸ್ತುತ ಯಾವುದಾದರೂ ಆನ್ ಕ್ಯಾಂಪಸ್ ಪದವಿ ಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆದವರು ಈ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ.
ಡೇಟಾ ಸೈನ್ಸ್ ಕ್ಷೇತ್ರವು ಅಗಾಧವಾಗಿ ಬೆಳೆಯುತ್ತಿದ್ದು, 2026 ರ ಹೊತ್ತಿಗೆ 11.5 ಮಿಲಿಯನ್ ಉದ್ಯೋಗಗಳು ಈ ವಲಯದಲ್ಲಿ ಸೃಷ್ಟಿಯಾಗಲಿವೆ. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣವನ್ನು ಪಡೆಯಲು ದೂರಶಿಕ್ಷಣ ಅತ್ಯಂತ ಸೂಕ್ತ ಮಾಧ್ಯಮವಾಗಿ ಹೊರಹೊಮ್ಮುತ್ತಿದೆ. ಹೀಗಾಗಿ ಮದ್ರಾಸ್ ಐಐಟಿಯು ಆನ್ಲೈನ್ ಮೂಲಕ ಪ್ರೊಗ್ರಾಮಿಂಗ್ ಮತ್ತು ಡೇಟಾ ಸೈನ್ಸ್ ಬಿಎಸ್ಸಿ ಪದವಿಯನ್ನು ಆರಂಭಿಸಿದ್ದು, ಪ್ರತಿಷ್ಠಿತ ಐಐಟಿಯ ಗುಣಮಟ್ಟದ ಶಿಕ್ಷಣ ಎಲ್ಲರಿಗೂ ದೊರಕುವಂತೆ ಮಾಡುವುದೇ ಈ ಕೋರ್ಸ್ನ ಉದ್ದೇಶವಾಗಿದೆ.
ದೇಶದ ಯಾವುದೇ ಭಾಗದಲ್ಲಾದರೂ ಕುಳಿತು ಆನ್ಲೈನ್ ಮೂಲಕ ಈ ಪದವಿಯನ್ನು ಅಧ್ಯಯನ ಮಾಡಬಹುದಾಗಿದೆ. ಒಟ್ಟು ಮೂರು ಹಂತಗಳಲ್ಲಿ ಪದವಿಯನ್ನು ವಿಭಾಜಿಸಲಾಗಿದೆ: ಫೌಂಡೇಶನ್ ಪ್ರೊಗ್ರಾಂ, ಡಿಪ್ಲೊಮಾ ಪ್ರೊಗ್ರಾಂ ಮತ್ತು ಡಿಗ್ರಿ ಪ್ರೊಗ್ರಾಂ. ಸರ್ಟಿಫಿಕೇಟ್, ಡಿಪ್ಲೊಮಾ ಅಥವಾ ಡಿಗ್ರಿಗಳನ್ನು ಪೂರೈಸುವ ವಿದ್ಯಾರ್ಥಿಗಳು ಬಯಸಿದಲ್ಲಿ ಆಯಾ ಹಂತಗಳ ನಂತರ ಕೋರ್ಸ್ನಿಂದ ಹೊರನಡೆಯಬಹುದಾಗಿದೆ.