ನವದೆಹಲಿ: ಈರುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದ್ದು, ಗ್ರಾಹಕರಿಗೆ ತಲೆನೋವು ತರಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದೊಂದಿಗೆ ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಹೆಚ್ಚುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕಾಗಿ ಈರುಳ್ಳಿ ರಫ್ತು ನಿಷೇಧಿಸಲಾಗಿದೆ. ಬಫರ್ ಸ್ಟಾಕ್‌ನಿಂದ ಈರುಳ್ಳಿ ಸರಬರಾಜು ಮಾಡಲಾಗುತ್ತಿದೆ. ಆಮದು ನಿಯಮಗಳನ್ನು ಕೇಂದ್ರ ಸರ್ಕಾರವು ಸಡಿಲಗೊಳಿಸಿದ್ದು, ಸರ್ಕಾರದ ಈ ಹೆಜ್ಜೆಯಿಂದ ಈರುಳ್ಳಿ ಬೆಲೆ ಕಡಿಮೆಯಾಗುವ ಸಾಧ್ಯತೆಯಿದ್ದು ಈರುಳ್ಳಿಯ ಲಭ್ಯತೆಯೂ ಹೆಚ್ಚಾಗುತ್ತದೆ. ದೆಹಲಿಯಲ್ಲಿ ಪ್ರತಿ ಕೆಜಿಗೆ 50 ರೂ., ಮುಂಬೈಯಲ್ಲಿ ಕೆಜಿಗೆ 67 ರೂ., ಕೋಲ್ಕತ್ತಾದಲ್ಲಿ ಕೆಜಿಗೆ 65 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ.
ಚೆನ್ನೈನಲ್ಲಿ ಈರುಳ್ಳಿಯನ್ನು ಕೆಜಿಗೆ 74 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಸಾಕಷ್ಟು ಮಳೆಯಾದ ಪರಿಣಾಮ ಸರಬರಾಜಿನಲ್ಲಿ ಅಡಚಣೆಯಾಗಿದೆ.
ಭಾರತದ ಅತಿದೊಡ್ಡ ಈರುಳ್ಳಿ ಉತ್ಪಾದಿಸುವ ರಾಜ್ಯ ಮಹಾರಾಷ್ಟ್ರವಾಗಿದ್ದು, ನಾಸಿಕ್‌ನಲ್ಲಿ ಈರುಳ್ಳಿ ಪ್ರತಿ ಕೆಜಿಗೆ 66 ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ದಕ್ಷಿಣ ಮತ್ತು ಪಶ್ಚಿಮ ಭಾರತದಲ್ಲಿ ಭಾರೀ ಮಳೆಯಿಂದಾಗಿ ಖಾರಿಫ್ ಬೆಳೆಗೆ ತೊಂದರೆಯಾಗಿದೆ. ಹೆಚ್ಚುತ್ತಿರುವ ಈರುಳ್ಳಿ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.