ನವದೆಹಲಿ: ದೇಶದ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಚೆನ್ನೈ ಹಾಗೂ ಇತರ ನಗರಗಳಲ್ಲಿ ಈರುಳ್ಳಿಯ ಸಗಟು ಬೆಲೆ 10 ರೂಪಾಯಿವರೆಗೆ ಕುಸಿದಿದೆ ಎಂದು ಸರ್ಕಾರಿ ಅಂಶಗಳು ಮಾಹಿತಿ ನೀಡಿವೆ.
ಈರುಳ್ಳಿಯ ಬೆಲೆ ಏರಿಕೆಯನ್ನು ಪರಿಶೀಲಿಸಲು ಸರ್ಕಾರವು ಈರುಳ್ಳಿಯ ಸಂಗ್ರಹಣೆ ಮೇಲೆ ಮಿತಿ ಹೇರಿದ ಮೇಲೆ 10 ರೂಪಾಯಿವರೆಗೆ ಈರುಳ್ಳಿ ಬೆಲೆ ಕುಸಿದಿದೆ ಎಂದು ಸರ್ಕಾರ ಹೇಳಿದೆ.
ಈರುಳ್ಳಿ ಉತ್ಪಾದಿಸುವ ಪ್ರದೇಶಗಳಲ್ಲೂ ಕೂಡಾ ಬೆಲೆ ಕುಸಿತವಾಗಿದೆ. ಏಷ್ಯಾದ ಅತಿ ದೊಡ್ಡ ಸಗಟು ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಸಲ್‌ಗಾಂವ್‌ನಲ್ಲಿ, ಸರ್ಕಾರದ ಆದೇಶದ ನಂತರ ಪ್ರತಿ ಕೆಜಿಗೆ 5 ರೂಪಾಯಿ ಇಳಿಕೆ ಕಂಡಿದ್ದು, ಒಂದು ಕೆ.ಜಿ. ಈರುಳ್ಳಿಗೆ 51 ರೂಪಾಯಿ ಇದೆ.
ಚೆನ್ನೈ ಮಾರುಕಟ್ಟೆಯಲ್ಲಿ ಅಕ್ಟೋಬರ್ 24ರಂದು ಒಂದು ಕೆ.ಜಿ 66 ರೂಪಾಯಿಗೆ ಮಾರಾಟ ಆಗಿತ್ತು. ಇದು ಅಕ್ಟೋಬರ್ 23ರಂದು ಅದರ ಬೆಲೆ 76 ರೂಪಾಯಿ ಇತ್ತು. ಈಗ ಮತ್ತಷ್ಟು ಬೆಲೆ ಕಡಿಮೆಯಾಗಿದೆ. ಹಾಗೆಯೇ ಮುಂಬೈ, ಬೆಂಗಳೂರು, ಭೋಪಾಲ್ನಲ್ಲಿ ಐದಾರು ರೂಪಾಯಿ ಇಳಿಕೆಯಾಗಿದೆ. ಇದರಿಂದ ಮುಂಬೈನಲ್ಲಿ 70 ರೂಪಾಯಿ, ಬೆಂಗಳೂರಿನಲ್ಲಿ 64 ರೂಪಾಯಿ, ಭೋಪಾಲ್ನಲ್ಲಿ 40 ರೂಪಾಯಿ ಬೆಲೆಯಿದೆ.
ಈರುಳ್ಳಿ ಸಂಗ್ರಹಣೆ ವಿಚಾರದಲ್ಲಿ ಸಾಕಷ್ಟು ಏರಿಕೆಯಾಗಿದೆ. ಕೆಲವು ದಿನಗಳ ಹಿಂದೆ ಚೆನ್ನೈಗೆ 1,120 ಟನ್ ಈರುಳ್ಳಿ ಸಂಗ್ರಹ ಈಗ 1400 ಟನ್ ಇದೆ. ದೆಹಲಿಯ ಅಜಾದ್ಪುರ ಮಂಡಿಯಲ್ಲಿ 530 ಟನ್ ಈರುಳ್ಳಿ ಸಂಗ್ರಹವಾಗಿದೆ. ಮುಂಬೈನಲ್ಲಿ 885 ಟನ್ ಇದ್ದ ಸಂಗ್ರಹ 1,560 ಟನ್ಗೆ ಏರಿದೆ.
ಅಕ್ಟೋಬರ್ 23ರಂದು ಸರ್ಕಾರ ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಯಡಿಯಲ್ಲಿ ಈರುಳ್ಳಿ ಸಂಗ್ರಹಣಾ ಆಮದಿನ ಮೇಲೆ ಚಿಲ್ಲರೆ ವ್ಯಾಪಾರಿಗಳ ಮೇಲೆ 2 ಟನ್ ಹಾಗೂ ಸಗಟು ವ್ಯಾಪಾರಿಗಳ ಮೇಲೆ 25 ಟನ್ ಮಿತಿ ಹೇರಿತ್ತು. ಈ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗಿದೆ ಎನ್ನಲಾಗ್ತಿದೆ.