ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಖುರ್ಚಿ ಮೇಲೆ ಕಣ್ಣಿಟ್ಟಿರುವ ಶಿವಸೇನೆ ಈ ಸಲ ತನ್ನ ಕುಟುಂಬದಿಂದಲೇ ಆದಿತ್ಯ ಠಾಕ್ರೆಗೆ ಟಿಕೆಟ್ ನೀಡಿದ್ದು, ಹೇಗಾದ್ರೂ ಮಾಡಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿ ತನ್ನ ನೇತೃತ್ವದಲ್ಲೇ ಸರ್ಕಾರ ರಚನೆ ಮಾಡುವ ಮಾಸ್ಟರ್ ಪ್ಲಾನ್ ಹಾಕಿಕೊಂಡಿದೆ.
ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಮೊಮ್ಮಗ, ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಇದೇ ಮೊದಲ ಬಾರಿಗೆ ವರ್ಲಿ ಕ್ಷೇತ್ರದಿಂದ ಕಳೆದ ಗುರುವಾರವೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದೇ ವೇಳೆ, ಮಾತನಾಡಿದ್ದ ಅವರು ಮಹಾರಾಷ್ಟ್ರ ಜನರಿಗೆ ಸಾಮಾನ್ಯ ವ್ಯಕ್ತಿ ಮುಖ್ಯಮಂತ್ರಿಯಾಗಲಿದ್ದು, ಆ ಸಾಮರ್ಥ್ಯ ತಮ್ಮಲಿದೆ ಎಂದು ಮುಖ್ಯಮಂತ್ರಿ ಆಗುವ ಇಂಗಿತ ಸಹ ಹೊರಹಾಕಿದ್ದಾರೆ. ಇದರ ಮಧ್ಯೆ ಉದ್ಧವ್ ಠಾಕ್ರೆ ಕೂಡ ಅದಕ್ಕೆ ಸಾಥ್ ನೀಡಿದ್ದು, ಹೊಸ ಸರ್ಕಾರ ರಚನೆಯಾಗುವ ವೇಳೆ ಶಿವಸೇನೆ ಕೂಡ ಸಮಾನವಾದ ಜವಾಬ್ದಾರಿ ತೆಗೆದುಕೊಳ್ಳಲು ಸಜ್ಜಾಗಿದೆ ಎಂದು ಹೇಳಿಕೆ ನೀಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇದೀಗ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್, ಶಿವಸೇನೆ ಮುಖ್ಯಸ್ಥರು ತಮ್ಮ ಆಶಯ ವ್ಯಕ್ತಪಡಿಸಿದ್ದು, ಅದರಲ್ಲಿ ಯಾವುದೇ ರೀತಿಯ ತಪ್ಪಿಲ್ಲ. ಹೊಸ ಸರ್ಕಾರ ರಚನೆ ವೇಳೆ ಬಿಜೆಪಿ ಹೈಕಮಾಂಡ್ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಅಕ್ಟೋಬರ್ 21ರಂದು 288 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಎಲೆಕ್ಷನ್ನಲ್ಲಿ 144 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 126 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧಿಸಿವೆ.