ನವದೆಹಲಿ: ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳ ವಿಧಾನಸಭಾ ಮತ್ತು ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ಮಾಡುವ ಡಿಲಿಮಿಟೇಶನ್ ಆಯೋಗಕ್ಕೆ ಸಹಾಯ ಮಾಡಲು ಜಮ್ಮು ಮತ್ತು ಕಾಶ್ಮೀರ, ಅಸ್ಸೋಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಮಣಿಪುರದ 15 ಸಂಸದರನ್ನು ಸಹಾಯಕ ಸದಸ್ಯರನ್ನಾಗಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ನಾಮನಿರ್ದೇಶನ ಮಾಡಿದ್ದಾರೆ.
ಇಬ್ಬರು ಕೇಂದ್ರ ಸಚಿವರು ಮತ್ತು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಇನ್ನುಳಿದಂತೆ 15 ಜನರಲ್ಲಿ ಕೇಂದ್ರ ರಾಜ್ಯ ಸಚಿವರಾದ ಕಿರನ್ ರಿಜಿಜು, ಜಿತೇಂದ್ರ ಸಿಂಗ್, ಬಾರಾಮುಲ್ಲಾ ಸಂಸದ ಮೊಹಮ್ಮದ್ ಅಕ್ಬರ್ ಲೋನ್, ಅನಂತ್‌ನಾಗ್ ಸಂಸದ ಹಸ್ನೈನ್ ಮಸೂಡಿ ಮತ್ತು ಜಮ್ಮು-ಪೂಂಚ್ ಸಂಸದ ಜುಗಲ್ ಕಿಶೋರ್ ಶರ್ಮಾ ಸೇರಿದಂತೆ ಪ್ರಮುಖರು ಇದ್ದಾರೆ.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 7ರಂದು ಡಿಲಿಮಿಟೇಶನ್ ಆಯೋಗ ರಚಿಸಲಾಗಿದೆ. ಕೇಂದ್ರಾಡಳಿ ಪ್ರದೇಶವಾಗಿರುವ ಜಮ್ಮು ಮತ್ತು ಕಾಶ್ಮೀರದ ಮರು ವಿಂಗಡಣೆ ಕಾಯ್ದೆ 2019ರ ಅಡಿಯಲ್ಲಿ ಕ್ಷೇತ್ರಗಳನ್ನು ಡಿಲಿಮಿಟೇಶನ್ ಆಯೋಗವು ಮರು ವಿಂಗಡಣೆ ಮಾಡುತ್ತದೆ.