ನೆಲ್ಲೂರು: ನೂರಾರು ವರ್ಷಗಳ ಹಿಂದೆ ಚೋಳರ ಕಾಲದಲ್ಲಿ ಪರಶುರಾಮ ಸ್ಥಾಪಿಸಿದ್ದ ದೇವಾಲಯವೊಂದು ಪತ್ತೆಯಾಗಿದೆ. ಚೋಳರ ಕಾಲದಲ್ಲಿ ಪೆನ್ನಾ ನದಿ ದಡದ ಮೇಲೆ ನಿರ್ಮಾಣವಾಗಿದ್ದ ಈ ದೇವಾಲಯವು ಗ್ರಾಮಸ್ಥರ ಶ್ರಮದಿಂದ ಬೆಳಕಿಗೆ ಬಂದಿದೆ.
ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಬೆಜರ್ಲ ತಾಲೂಕಿನ ಪೆರುಮಾಲುಪಾಡು ಗ್ರಾಮದ ಬಳಿಯ ಪೆನ್ನಾ ನದಿಯ ದಡದಲ್ಲಿರುವ ನೂರಾರು ವರ್ಷಗಳ ಹಳೆಯ ನಾಗೇಶ್ವರಸ್ವಾಮಿ ದೇವಸ್ಥಾನ ಪತ್ತೆಯಾಗಿದೆ. 50 - 80 ವರ್ಷಗಳ ಹಿಂದೆ ಭಾರಿ ಮಳೆಯಿಂದಾಗಿ ಉಂಟಾದ ಪ್ರವಾಹಕ್ಕೆ ಈ ದೇವಾಲಯ ನದಿಯಲ್ಲಿ ಮುಳುಗಡೆಯಾಗಿತ್ತು. ಈ ನದಿಯ ತಟದಲ್ಲಿದ್ದ ಜನ ಸುರಕ್ಷಿತ ಸ್ಥಳಕ್ಕೆ ತೆರಳಿ ಅಲ್ಲೇ ವಾಸಿಸುತ್ತಿದ್ದರು. ಈಗ ಆ ಊರು ಪೆರುಮಾಲುಪಾಡು ಗ್ರಾಮವಾಗಿದೆ.
ಮುಳುಗಡೆಯಾಗಿದ್ದ ದೇವಸ್ಥಾನ ಮರುಸ್ಥಾಪನೆ ಮಾಡಲು ಇಲ್ಲಿನ ಗ್ರಾಮಸ್ಥರು ನಿರ್ಧರಿಸಿದ್ದರು. ದೇವಾಲಯ ಮುಳಗಡೆಯಾಗಿದ್ದ ಸ್ಥಳವನ್ನು ಗುರುತಿಸಿ, ಜೆಸಿಬಿ ಮೂಲಕ ಮರಳು ಅಗೆದು ದೇವಾಲಯವನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಪುರಾತತ್ವ ಇಲಾಖೆಗೆ ಈ ಮಾಹಿತಿಯನ್ನು ನೀಡಿದ್ದಾರೆ.
ಸುಮಾರು 200 ವರ್ಷಗಳ ಹಿಂದೆ ಈ ದೇವಾಲಯ ನಿರ್ಮಾಣವಾಗಿದೆಯಂತೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ಮಾಹಿತಿ ಕಲೆ ಹಾಕಿದ ನಂತರ ದೇವಾಲಯದಲ್ಲಿರುವ ಮೂರ್ತಿಯನ್ನು ತಮ್ಮ ಗ್ರಾಮದಲ್ಲಿ ಮರು ಸ್ಥಾಪನೆ ಮಾಡುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ನಾಗೇಶ್ವರಸ್ವಾಮಿ ದೇವಸ್ಥಾನ ನೋಡಲು ಜನ ಸಾಗರವೇ ಹರಿದು ಬರುತ್ತಿದ್ದು, ಕೆಲ ಮಹಿಳೆಯರು ದೇವಾಲಯಕ್ಕೆ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದರು.