ರಾಯಗಡ (ಒಡಿಶಾ) : ಶಿಕ್ಷಕರು ಅಂದ್ರೆ, ಮಕ್ಕಳಿಗೆ ಪಾಠ ಬೋಧಿಸುವುದು, ಅವರ ಏಳ್ಗೆಗಾಗಿ ಶ್ರಮಿಸುವುದು ಅಷ್ಟೇ ಎಂಬುದು ಕೆಲವರ ಅಭಿಪ್ರಾಯ. ಆದ್ರೆ, ಇಲ್ಲೊಬ್ಬ ಟೀಚರ್ ತುಂಬಾ ಡಿಫ್ರೆಂಟ್ ಆಗಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕರಾಗಿರುವ ಟಿ.ಈಶ್ವರ್ ರಾವ್, ಸ್ಮಶಾನವನ್ನೂ ಸುಂದರವಾಗಿ ಕಾಣುವಂತೆ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದಾರೆ.
ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಸೂಕ್ತ ಪ್ರದೇಶವಿಲ್ಲದ ಕಾರಣ ಈಶ್ವರ್, ತಮ್ಮ ಸ್ವಂತ ಖರ್ಚಿನಿಂದ 4 ಎಕರೆ ನಿರ್ಜನ ಪ್ರದೇಶವನ್ನ ನೆಲಸಮಗೊಳಿಸಿ, ಸ್ಮಶಾನ ಮಾಡಿದರಂತೆ. ಸ್ಥಳೀಯರ ಸಹಕಾರದಿಂದ ರುದ್ರಭೂಮಿಯಲ್ಲೇ ಶಿವನ ಪ್ರತಿಮೆ ನಿರ್ಮಿಸಿದ್ದಾರೆ. ಸ್ಮಶಾನದ ಸುತ್ತ ಕಾಂಪೌಂಡ್ ಕಟ್ಟಿದ್ದು, ಚಿತಾಗಾರ ಕೂಡ ನಿರ್ಮಿಸಿದ್ದಾರೆ.
ಶವಗಳನ್ನ ಹವಾ ನಿಯಂತ್ರಿತದಲ್ಲಿ ಇಡಲು, ಪಟ್ಟಣಗಳಿಂದ ಮೃತದೇಹ ರವಾನಿಸಲು ಅನುಕೂಲವಾಗುವಂತೆ ವಾಹನ ಸೌಲಭ್ಯಗಳನ್ನೂ ಮಾಡಿದ್ದಾರೆ. ಮೃತರ ಕುಟುಂಬಸ್ಥರು ಯಾವುದೇ ಖರ್ಚಿಲ್ಲದೇ ಅಂತ್ಯ ಸಂಸ್ಕಾರ ಮಾಡಿ ಹಿಂದಿರುಗುವುದು ಇವರ ಉದ್ದೇಶವಾಗಿದೆ.
ಸ್ಮಶಾನ ಸುಂದರವಾಗಿ ಕಾಣಲು ಅಲ್ಲಲ್ಲಿ ಗಿಡಗಳನ್ನ ನೆಟ್ಟಿದ್ದು, ಬಿಡುವಿನ ಸಮಯದಲ್ಲಿ ಸುತ್ತಲಿನ ಪ್ರದೇಶವನ್ನ ಸ್ವಚ್ಛಗೊಳಿಸುತ್ತಾರೆ. ಜತೆಗೆ ಶಾಲೆಯ ಉದ್ಯಾನ ಸ್ವಚ್ಛಗೊಳಿಸಿ ಖುಷಿ ಕಾಣುತ್ತಾರೆ. ಈ ಉತ್ತಮ ಕಾರ್ಯವನ್ನು ಗುರುತಿಸಿ ಇವರಿಗೆ ಪ್ರಕೃತಿಯ ಮಿತ್ರ, ಮರಗಳ ಸ್ನೇಹಿತ ಎಂಬ ಪ್ರಶಸ್ತಿಗಳು ಒಲಿದು ಬಂದಿವೆ.