ಭವಾನಿಪಟ್ನಾ (ಒಡಿಶಾ): ಕೊರೊನಾ ವೈರಸ್ ಬಗ್ಗೆ ತಪ್ಪು ಮಾಹಿತಿ ಹರಡಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಒಡಿಶಾದ ಕಲಾಹಾಂಡಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಡುಕೆಲ್ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕ ಬಿಂದು ಮಹಾನಂದ್, ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಬೆಂಗಳೂರಿನಿಂದ ಹಿಂದಿರುಗಿ ಗೋಲಮುಂಡ ಬ್ಲಾಕ್‌ನ ಖಲಿಯಾಕಣಿ ಗ್ರಾಮದಲ್ಲಿರುವ ತನ್ನ ಮನೆಯಲ್ಲಿದ್ದಾನೆ ಎಂದು ವಾಟ್ಸ್ಆ್ಯಪ್ ಮೂಲಕ ಸಂದೇಶ ಕಳುಹಿಸಿದ್ದರು.
ಇದೇ ಸಂದೇಶವನ್ನು ಅನುಸರಿಸಿ ಪೊಲೀಸರು ಮತ್ತು ಕೆಲ ಅಧಿಕಾರಿಗಳು ಗೋಲಮುಂಡಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ, ಯಾವುದೇ ಸೋಂಕಿತ ಕೂಡ ಪತ್ತೆಯಾಗಿಲ್ಲ. ಈ ಮಾಹಿತಿಯು ಸುಳ್ಳು ಎಂದು ತಿಳಿದುಬಂದಿದ್ದು, ಶಿಕ್ಷಕ ಮಹಾನಂದ್ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾನು ನಿರಪರಾಧಿ, ಯಾರೋ ತನ್ನ ಮೊಬೈಲ್ ಫೋನ್ ಬಳಸಿ ಕಿಡಿಗೇಡಿತನ ಮಾಡಿದ್ದಾರೆ ಎಂದು ಶಿಕ್ಷಕ ಹೇಳಿಕೊಂಡಿದ್ದಾನೆ. ಕೊರೊನಾ ಸೋಂಕಿನ ಬಗ್ಗೆ ಯಾರೇ ವದಂತಿಗಳನ್ನು ಹರಡಿದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ಈ ಹಿಂದೇ ಎಚ್ಚರಿಸಿತ್ತು.