ಭುವನೇಶ್ವರ: 21 ದಿನಗಳ ಲಾಕ್‌ಡೌನ್ ಹಿನ್ನೆಲೆ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 36.10 ಲಕ್ಷ ಕಾರ್ಮಿಕರಿಗೆ ನಿರುದ್ಯೋಗ ಭತ್ಯೆ ನೀಡಲು ರಾಜ್ಯಕ್ಕೆ ಅವಕಾಶ ನೀಡುವಂತೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
21 ದಿನಗಳ ಲಾಕ್‌ಡೌನ್‌ನಿಂದಾಗಿ ಬಡ ಜನರು, ಅದರಲ್ಲೂ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕಾರ್ಮಿಕರ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಪ್ರಧಾನ ಮಂತ್ರಿಗೆ ಬರೆದ ಪತ್ರದಲ್ಲಿ ಪಟ್ನಾಯಕ್ ತಿಳಿಸಿದ್ದಾರೆ.
ಒಡಿಶಾದಲ್ಲಿ, ಪ್ರಸಕ್ತ ವರ್ಷದಲ್ಲಿ 36,10,797 ಸಕ್ರಿಯ ಕಾರ್ಮಿಕರಿದ್ದಾರೆ. ಅವರು ಲಾಕ್ ಡೌನ್ ಕಾರಣ ಈ ಯೋಜನೆಯಡಿಯಲ್ಲಿ ಕೆಲಸ ಪಡೆಯಲು ವಂಚಿತರಾಗಿದ್ದಾರೆ.ಅಲ್ಲದೆ ದಿನ ದೂಡಲು ಕಷ್ಟಪಡುತ್ತಿದ್ದಾರೆ.
ಅವರ ಜೀವನೋಪಾಯವನ್ನು ಸುಧಾರಿಸಲು ಎಂಜಿಎನ್‌ಆರ್‌ಇಜಿ ಕಾಯ್ದೆಯ ಪ್ರಕಾರ ವೇತನ ದರದ ನಾಲ್ಕನೇ ಒಂದು ಭಾಗವಾಗಿರುವ 380.39 ಕೋಟಿ ರೂ.ಗಳನ್ನು ನಿರುದ್ಯೋಗ ಭತ್ಯೆಯಾಗಿ ಮಂಜೂರು ಮಾಡಬಹುದು. ಈ ಹಿನ್ನೆಲೆ ಅವರ ನೋವಿಗೆ ಸ್ಪಂದಿಸಬಹುದು ಎಂದು ಮನವಿ ಮಾಡಿದ್ದಾರೆ.