ಭುವನೇಶ್ವರ: ದೀಪಗಳ ಹಬ್ಬ ದೀಪಾವಳಿ ಆರಂಭಗೊಳ್ಳಲು ಈಗಾಗಲೇ ದಿನಗಣನೇ ಆರಂಭಗೊಂಡಿದ್ದು, ಈ ಸಲ ಪರಿಸರ ಪ್ರೇಮಿ ದೀಪಾವಳಿ ಆಚರಣೆ ಮಾಡಲು ಕೆಲವೊಂದು ರಾಜ್ಯಗಳು ಮಹತ್ವದ ನಿರ್ಧಾರ ಕೈಗೊಳ್ಳುತ್ತಿವೆ.
ರಾಜಸ್ಥಾನದಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಾರಾಟ ಮಾಡುವುದು ಈಗಾಗಲೇ ನಿಷೇಧ ಮಾಡಲಾಗಿದ್ದು, ಇದರ ಬೆನ್ನಲ್ಲೇ ಇದೀಗ ಒಡಿಶಾ ಸರ್ಕಾರ ಕೂಡ ಮಹತ್ವದ ನಿರ್ಧಾರ ಕೈಗೊಂಡಿದ್ದು, ನವೆಂಬರ್ 10ರಿಂದ 30ರವರೆಗೆ ಪಟಾಕಿ ಮಾರಾಟ ಹಾಗೂ ಪಟಾಕಿ ಸುಡುವುದರ ಮೇಲೆ ನಿರ್ಬಂಧ ಹಾಕಿದೆ.
ಒಂದು ವೇಳೆ ಯಾರಾದರೂ ಈ ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧ ಪರಿಸರ ವಿಪತ್ತು ನಿರ್ವಹಣೆ ಕಾಯ್ದೆ 2005ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ಹೆಚ್ಚಾಗಿ ಜನರಿಗೆ ಹೆಚ್ಚಿನ ತೊಂದರೆಯಾಗುವ ಸಾಧ್ಯತೆ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಇನ್ನು ಕರ್ನಾಟಕದಲ್ಲೂ ಪಟಾಕಿ ಸಿಡಿಸುವುದನ್ನ ಬ್ಯಾನ್ ಮಾಡುವುದಕ್ಕೆ ಸಂಬಂಧಿಸಿದಂತೆ ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.