ಭುವನೇಶ್ವರ : ಬೇರೆ ರಾಜ್ಯ ಮತ್ತು ವಿದೇಶಗಳಿಂದ ರಾಜ್ಯಕ್ಕೆ ಮರಳುತ್ತಿರುವವರನ್ನು ಕೆಟ್ಟ ದೃಷ್ಟಿಯಿಂದ ನೋಡಬೇಡಿ, ಅವರನ್ನು ನಮ್ಮ ಸಹೋದರ ಸಹೋದರಿಯರೆಂದು ಒಪ್ಪಿಕೊಳ್ಳಿ ಎಂದು ಒಡಿಶಾ ಸರ್ಕಾರ ರಾಜ್ಯದ ಜನತೆಗೆ ಮನವಿ ಮಾಡಿದೆ.
ಈ ಬಗ್ಗೆ ಮಾತನಾಡಿದ ರಾಜ್ಯ ಸರ್ಕಾರದ ವಕ್ತಾರ ಸುಬ್ರೋಟೋ ಬಾಗ್ಚಿ, ಇದುವರೆಗೆ 35,540 ವಲಸೆ ಕಾರ್ಮಿಕರು ಮತ್ತು ಅನಿವಾಸಿಯರು ಒಡಿಶಾಕ್ಕೆ ಹಿಂದಿರುಗಿದ್ದಾರೆ. ರಾಜ್ಯದಲ್ಲಿ ದಾಖಲಾದ ಪಾಸಿಟಿವ್ ಪ್ರಕರಣಗಳು ಮತ್ತು ಕೆಲವೆಡೆ ಕ್ವಾರಂಟೈನ್ ಉಲ್ಲಂಘನೆ ಆಗುತ್ತಿರುವುದಕ್ಕೆ ರಾಜ್ಯಕ್ಕೆ ಮರಳಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಕೊರೊನಾ ಪೀಡಿತ ರಾಜ್ಯಗಳಿಂದ ಬಂದವರನ್ನು ಕೀಳಾಗಿ ನೋಡಬೇಡಿ. ಅವರಲ್ಲಿ ಕೆಲವರಿಗೆ ಪಾಸಿಟಿವ್ ಬಂದಿದ್ದು ನಿಜ, ಅಂತವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.
ಮೇ 3 ರಿಂದ ನಿತ್ಯ ಒಡಿಯಾ ಸಹೋದರರು ಮತ್ತು ಸಹೋದರಿಯರು ರಾಜ್ಯಕ್ಕೆ ಮರಳುತ್ತಿದ್ದಾರೆ. ಬುಧವಾರ 7,451 ಜನರು ಮರಳಿದ್ದಾರೆ. ಇದುವರೆಗೆ 35,540 ಜನರು ರೈಲು, ಬಸ್ ಮತ್ತು ಇತರ ವಾಹನಗ ಮೂಲಕ ರಾಜ್ಯಕ್ಕೆ ಆಗಮಿಸಿದ್ದಾರೆ. ಹಿಂದಿರುಗಿದವರಿಗೆ ರಾಜ್ಯದಲ್ಲಿ ಶಾಶ್ವತವಾಗಿ ವಾಸಿಸುವವರಿಗೆ ಇರುವಷ್ಟೇ ಹಕ್ಕುಗಳಿವೆ. ಅವರು ಯಾವುದೇ ನಾಗರಿಕರಿಗಿಂತ ಕಡಿಮೆಯಿಲ್ಲ ಎಂದು ಬಾಗ್ಚಿ ಹೇಳಿದ್ದಾರೆ.